ಶಿವಮೊಗ್ಗ: ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಇದೇ ಆಗಸ್ಟ್ 22 ಮತ್ತು 23, 2026 ರಂದು ನೆಹರು ಒಳಾಂಗಣ ಕ್ರೀಡಾಂಗಣ, ಶಿವಮೊಗ್ಗದಲ್ಲಿ “ಶಿವಮೊಗ್ಗ ಓಪನ್ 7ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ”ಯನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ವಿನೋದ್, ಇದು ಕರ್ನಾಟಕ ರಾಜ್ಯದ ಬಹುದೊಡ್ಡ ಕರಾಟೆ ಪಂದ್ಯಾವಳಿಯಾಗಿದೆ.
ಅಮೆರಿಕ, ಶ್ರೀಲಂಕಾ, ನೇಪಾಳ ಮತ್ತು ಗಬಾನ್ ದೇಶಗಳ ಕ್ರೀಡಾಪಟುಗಳು ಸೇರಿದಂತೆ ದೇಶದ 8 ರಾಜ್ಯಗಳಿಂದ 1500 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಶಿವಮೊಗ್ಗದ 200 ಸ್ಥಳೀಯ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಹಾಗೂ ಏಷ್ಯನ್ ಮಟ್ಟದ ತೀರ್ಪುಗಾರರು ಪಂದ್ಯಾವಳಿಯನ್ನು ನಡೆಸಿಕೊಡಲಿದ್ದಾರೆ ಎಂದರು.
ವಿಶೇಷವಾಗಿ ಅಮೆರಿಕದ ಗ್ರಾಂಡ್ ಮಾಸ್ಟರ್ ಫೆರ್ರಿ ಎಚ್ ಮೌಲೆ ರವರು ಈ ಪಂದ್ಯಾವಳಿಗೆ ಆಗಮಿಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಕಟಾ ಮತ್ತು ಕುಮಿಟೆ ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ. 5 ವರ್ಷದಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಿತಿಯ ವಿಭಾಗಗಳು ಇರಲಿವೆ. ಹೊರ ರಾಜ್ಯ ಮತ್ತು ಜಿಲ್ಲೆಯ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ, ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ. ವಿಜೇತರಿಗೆ ಆಕರ್ಷಕ ಪದಕ, ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದರು.
ಅತಿ ಹೆಚ್ಚು ಪದಕಗಳನ್ನು ಪಡೆದ ತಂಡಕ್ಕೆ ವಿಶೇಷ ಆಕರ್ಷಣೆಯಾಗಿ ಓಲಾ ಬೈಕನ್ನು ಸಹ ಬಹುಮಾನವಾಗಿ ನೀಡಲಾಗುವುದು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ಪಡೆದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮವೂ ಇರುತ್ತದೆ ಎಂದರು.
ಪಂದ್ಯಾವಳಿಯ ಉದ್ಘಾಟನೆಯು ಆಗಸ್ಟ್ 22 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ನಗರದ ರಾಜಕೀಯ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಎರಡೂ ದಿನ ಪಂದ್ಯಗಳು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ನಡೆಯಲಿವೆ ಎಂದರು.
previous post
