ಜನ ನೋಟ
ಶಿವಮೊಗ್ಗ

ಈದ್ ಹಬ್ಬಕ್ಕೆ ಶಿವಮೊಗ್ಗದಲ್ಲಿ ಬಿಗಿ ಭದ್ರತೆ: 3,000 ಪೊಲೀಸರ ನಿಯೋಜನೆ

12 ಕೆಎಸ್‌ಆರ್‌ಪಿ, ಆರ್‌ಎಎಫ್, ಎಸ್‌ಐಆರ್ ಹಾಗೂ 21 ಡಿಆರ್ ತುಕುಡಿಗಳ ನಿಯೋಜನೆ; 13 ಮಂದಿ ಗಡಿಪಾರು

ಶಿವಮೊಗ್ಗ: ಈದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಭದ್ರತೆಗಾಗಿ ಜಿಲ್ಲಾದ್ಯಂತ ಸುಮಾರು 3,000 ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 12 ಕೆಎಸ್‌ಆರ್‌ಪಿ ತುಕುಡಿಗಳು, ಒಂದು ಆರ್‌ಎಎಫ್ ತುಕುಡಿ ಹಾಗೂ ಒಂದು ಎಸ್‌ಐಆರ್ ತುಕುಡಿಯನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ಇದರ ಜೊತೆಗೆ 21 ಡಿಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಮೂರು ವಾರಗಳಿಂದ ಶಾಂತಿ ಸಭೆ

ಈದ್ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಜಿಲ್ಲಾದ್ಯಂತ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಪೊಲೀಸ್ ಇಲಾಖೆಯಿಂದ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪೂರ್ಣಗೊಳಿಸಲಾಗಿದ್ದು, ಮಸೀದಿ ಹಾಗೂ ವಿವಿಧ ಸಮಿತಿ ಮುಖಂಡರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗಿದೆ ಎಂದರು.

ಹಬ್ಬದ ಸಂದರ್ಭದಲ್ಲಿ ಪಾಲಿಸಬೇಕಾದ ಅಗತ್ಯ ಸೂಚನೆಗಳು ಹಾಗೂ ಮಾರ್ಗಸೂಚಿಗಳನ್ನು ಮುಖಂಡರಿಗೆ ನೀಡಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಧ್ವನಿವರ್ಧಕಗಳ ಡೆಸಿಬಲ್ ಮಿತಿ ಕಡ್ಡಾಯ

ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕಂಟ್ರೋಲ್ ಪ್ಲಾನ್ ಮತ್ತು ಎಕ್ಸೈಸ್ ಪ್ಲಾನ್ ಸಿದ್ಧಪಡಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಧ್ವನಿವರ್ಧಕಗಳ ಡೆಸಿಬಲ್ ಮಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಈ ಕುರಿತು ಹೊರಡಿಸಿರುವ ಎಲ್ಲ ಆದೇಶಗಳನ್ನು ಮಸೀದಿ ಹಾಗೂ ವಿವಿಧ ಸಮಿತಿ ಮುಖಂಡರಿಗೆ ತಲುಪಿಸಲಾಗಿದೆ. ನಿಯಮಗಳ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ದ್ವೇಷದ ಹೇಳಿಕೆ, ಕೃತ್ಯಕ್ಕೆ ಕಡಿವಾಣ

ಮೆರವಣಿಗೆ ಅಥವಾ ಹಬ್ಬದ ಸಂದರ್ಭದಲ್ಲಿ ಇತರೆ ಸಮುದಾಯಗಳಿಗೆ ಧಕ್ಕೆ ತರುವಂತಹ ಹೇಳಿಕೆ, ಕೃತ್ಯ ಅಥವಾ ದ್ವೇಷ ಮೂಡಿಸುವ ಪ್ರಯತ್ನ ಕಂಡುಬಂದರೆ ತಕ್ಷಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ನಿಖಿಲ್ ಎಚ್ಚರಿಕೆ ನೀಡಿದರು.

13 ಮಂದಿ ಗಡಿಪಾರು; 312 ಮಂದಿಯ ವಿರುದ್ಧ ಕ್ರಮ

ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದಾದವರ ವಿರುದ್ಧ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಸುಮಾರು 13 ಮಂದಿಯನ್ನು ಗಡಿಪಾರು ಮಾಡಲಾಗಿದ್ದು, 110ರ ಅಡಿಯಲ್ಲಿ 312 ಮಂದಿಯ ವಿರುದ್ಧ ಸೆಕ್ಯುರಿಟಿ ಪ್ರೊಸೀಡಿಂಗ್ಸ್ ಆರಂಭಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿರುವವರು, ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ವ್ಯಕ್ತಿಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈದ್ ಹಿನ್ನೆಲೆಯಲ್ಲಿ ‘ಕಾಂತಾರ’ ಸಿನಿಮಾ ಡೈಲಾಗ್ ಹೊಂದಿರುವ ಕೆಲವು ರೀಲ್ಸ್‌ಗಳು ವೈರಲ್ ಆಗುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್‌ಪಿ ನಿಖಿಲ್, ವೈರಲ್ ಆಗಿರುವ ರೀಲ್ಸ್‌ಗಳನ್ನು ಪೊಲೀಸರು ಈಗಾಗಲೇ ಗಮನಿಸಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ಡಿಆರ್ ಪ್ರಕ್ರಿಯೆ ಆರಂಭಿಸಿ, ಸಂಬಂಧಪಟ್ಟ ವಿಷಯಗಳನ್ನು ಡಿಲೀಟ್ ಮಾಡಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಅದರಲ್ಲಿರುವ ವಿಷಯವನ್ನು ಪರಿಶೀಲಿಸಬೇಕು. ದ್ವೇಷ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹಂಚಿಕೊಂಡರೆ ಅಂತಹವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾದ್ಯಂತ 36 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಕ್ರಮ ಸಾಗಾಣಿಕೆ ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಈಗಾಗಲೇ ಅಕ್ರಮ ಸಾಗಾಣಿಕೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್‌ಪಿ ನಿಖಿಲ್ ಹೇಳಿದರು.

ಶಾಂತಿಯುತ ಈದ್ ಆಚರಣೆಗೆ ಮನವಿ

ಕೋಮು ಸೌಹಾರ್ದತೆ ಹಾಗೂ ಶಾಂತಿ ಕಾಪಾಡುವಲ್ಲಿ ಮಾಧ್ಯಮ ಮಿತ್ರರು ಸಹಕಾರ ನೀಡಬೇಕು. ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಈದ್ ಹಬ್ಬವನ್ನು ಆಚರಿಸೋಣ ಎಂದು ಎಸ್‌ಪಿ ನಿಖಿಲ್ ಮನವಿ ಮಾಡಿದರು.

Related posts

ಶಿಕಾರಿಪುರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

JanaNota Editor

ಶಿವಮೊಗ್ಗಕ್ಕೆ ಕಿಯಾ ಸೊರೆಂಟೊ ಎಂಟ್ರಿ : ಸೆ.8ರಂದು ಭರ್ಜರಿ ಪ್ರಿ-ಲಾಂಚ್

JanaNota Editor

ಕಾಣಿಕೆ ಹುಂಡಿಯಲ್ಲಿ ₹1,01,73,650/ ಸಂಗ್ರಹ

JanaNota Editor