ಶಿವಮೊಗ್ಗ: ಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆಯನ್ನು ಈ ಬಾರಿ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಶಿಷ್ಟವಾಗಿ ಆಚರಿಸಲು ಗೋವರ್ಧನ ಟ್ರಸ್ಟ್, ವಾಸವಿ ವಿದ್ಯಾಲಯ, ಇಸ್ಕಾನ್ ಶಿವಮೊಗ್ಗ ಹಾಗೂ ಬಾಲಗೋಕುಲ ಸಂಸ್ಥೆಗಳು ಯೋಜಿಸಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆ.ಇ. ಕಾಂತೇಶ್, ಸೆಪ್ಟೆಂಬರ್ 5ರ ಶನಿವಾರ ಸಂಜೆ 4 ಗಂಟೆಗೆ ನಗರದ ವಾಸವಿ ವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಿವಮೊಗ್ಗದ ಮಕ್ಕಳು, ಯುವಕ-ಯುವತಿಯರು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ
5 ವರ್ಷದೊಳಗಿನ ಮಕ್ಕಳಿಗೆ ‘ಕೃಷ್ಣ ವೇಷ’ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳು ಶ್ರೀಕೃಷ್ಣನ ವಿವಿಧ ರೂಪಗಳಲ್ಲಿ ವೇಷಭೂಷಣ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
5ರಿಂದ 10 ವರ್ಷದ ಮಕ್ಕಳಿಗೆ ಹಾಗೂ ಅವರ ತಾಯಂದಿರಿಗೆ ‘ಯಶೋಧ ಮತ್ತು ಕೃಷ್ಣ’ ರೂಪಕ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ತಾಯಂದಿರಿಗೆ ಯಾವುದೇ ವಯೋಮಿತಿ ಇರುವುದಿಲ್ಲ.
ಈ ವಿಭಾಗದಲ್ಲಿ ಮೊದಲು ನೋಂದಾಯಿಸಿಕೊಳ್ಳುವ 20 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
13ರಿಂದ 18 ವರ್ಷದ ಮಕ್ಕಳಿಗಾಗಿ ಮಡಿಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಒಂದು ತಂಡದಲ್ಲಿ ಗರಿಷ್ಠ 10 ಸ್ಪರ್ಧಿಗಳಿಗೆ ಅವಕಾಶವಿರಲಿದೆ.
ಈ ವಿಭಾಗದಲ್ಲಿ ಮೊದಲು ನೋಂದಾಯಿಸುವ ಯುವಕರ 5 ತಂಡಗಳು ಹಾಗೂ ಯುವತಿಯರ 5 ತಂಡಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು. ವಯೋಮಿತಿ ದೃಢೀಕರಣಕ್ಕಾಗಿ ಸ್ಪರ್ಧಿಗಳು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಇಸ್ಕಾನ್ ಶಿವಮೊಗ್ಗ, ಶ್ರೀ ಶಾರದಾ ನೃತ್ಯ ಕಲಾಕೇಂದ್ರ, ನಾಟ್ಯಪ್ರಿಯಾ ನೃತ್ಯ ಕಲಾಕೇಂದ್ರ ಹಾಗೂ ಶ್ರೀ ಸಾಯಿ ವೃಂದ ಸುಗಮ ಸಂಗೀತ ಶಾಲೆ ವತಿಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಅಗತ್ಯವಿರುವ ಅರ್ಜಿ ನಮೂನೆಗಳು ಎಸ್.ಪಿ.ಎಂ. ರಸ್ತೆಯಲ್ಲಿರುವ ಗೋವರ್ಧನ ಟ್ರಸ್ಟ್ ಕಚೇರಿ ಹಾಗೂ ಕೋಟೆ ರಸ್ತೆಯಲ್ಲಿರುವ ವಾಸವಿ ವಿದ್ಯಾಲಯದ ಕಚೇರಿಯಲ್ಲಿ ಕಚೇರಿ ಸಮಯದಲ್ಲಿ ಲಭ್ಯವಿರುತ್ತವೆ.
ಸ್ಪರ್ಧೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ 9964586181, 9742162266, 9481504737 ಹಾಗೂ 8277083025 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಮಕ್ಕಳು, ಯುವಕರು ಹಾಗೂ ಮಹಿಳೆಯರನ್ನು ಒಳಗೊಂಡಂತೆ ಎಲ್ಲ ವಯೋಮಾನದವರಿಗೂ ಭಾಗವಹಿಸಲು ಅವಕಾಶ ಕಲ್ಪಿಸಿರುವ ಈ ಕಾರ್ಯಕ್ರಮವು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ.
