ಜನ ನೋಟ
ಶಿವಮೊಗ್ಗ

ಶ್ರೀಕೃಷ್ಣ ಕೇವಲ ವ್ಯಕ್ತಿಯಲ್ಲ, ಬದುಕಿನ ಮಾರ್ಗದರ್ಶಕ : ಚನ್ನಬಸಪ್ಪ

ಶಿವಮೊಗ್ಗ: ಶ್ರೀಕೃಷ್ಣ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಪ್ರಕೃತಿ, ಪರಮಾತ್ಮ ಹಾಗೂ ಬದುಕಿನ ಮಾರ್ಗದರ್ಶಕರಾಗಿದ್ದಾರೆ. ಅಧರ್ಮದ ವಿರುದ್ಧ ಹೋರಾಡಿ ಧರ್ಮವನ್ನು ಸಂಸ್ಥಾಪಿಸಲು ಶ್ರೀಕೃಷ್ಣರು ನೀಡಿದ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಕೃಷ್ಣರ ಜೀವನ ಹಾಗೂ ಬಾಲ್ಯಲೀಲೆಗಳು ಇಂದಿಗೂ ಜನರಿಗೆ ಸ್ಫೂರ್ತಿಯಾಗಿವೆ. ಅಧರ್ಮದ ವಿರುದ್ಧ ಹೋರಾಡಲು ಹಾಗೂ ಕೆಟ್ಟದ್ದನ್ನು ಸಹಿಸಿಕೊಳ್ಳದಂತೆ ಅವರು ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಧರ್ಮಕ್ಕೆ ಹಾನಿಯಾದಾಗಲೆಲ್ಲ ಧರ್ಮದ ರಕ್ಷಣೆಗಾಗಿ ಅವತರಿಸುವುದಾಗಿ ಶ್ರೀಕೃಷ್ಣರು ಸಾರಿದ್ದಾರೆ ಎಂದು ಹೇಳಿದರು.

ಅರ್ಜುನನಿಗೆ ವಿಶ್ವರೂಪ ದರ್ಶನ ನೀಡಿ ಗುರಿಯತ್ತ ಸಾಗುವ ಮಾರ್ಗ ತೋರಿಸಿದ ಶ್ರೀಕೃಷ್ಣರು ಧರ್ಮದ ಸಾರಥಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ಆದ್ದರಿಂದ ದ್ರೋಹ ಮತ್ತು ಅಧರ್ಮದ ವಿರುದ್ಧ ದಿಟ್ಟ ಹೆಜ್ಜೆ ಇಟ್ಟು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಮಾತನಾಡಿ, ಶ್ರೀಕೃಷ್ಣ ಆನಂದದ ಪ್ರತೀಕವಾಗಿದ್ದು, ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತರಾಗದ ಪರಮಾತ್ಮ ಎಂದು ಹೇಳಿದರು. ದುಷ್ಟರ ಸಂಹಾರ ಹಾಗೂ ಧರ್ಮದ ರಕ್ಷಣೆ ಅವರ ಪ್ರಮುಖ ಗುರಿಯಾಗಿತ್ತು ಎಂದರು.

ಭದ್ರಾವತಿಯ ಸರ್.ಎಂ.ವಿ. ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಪಾರ್ವತಮ್ಮ ಎಂ. ವಿಶೇಷ ಉಪನ್ಯಾಸ ನೀಡಿ, ಶ್ರೀಕೃಷ್ಣರು ಪ್ರೀತಿ, ಧರ್ಮ, ಮಾನವೀಯತೆ, ಜ್ಞಾನ ಮತ್ತು ಮಾರ್ಗದರ್ಶನದ ಪ್ರತೀಕವಾಗಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ, ಯಾದವ ಸಮಾಜದ ಜಿಲ್ಲಾಧ್ಯಕ್ಷ ಅಂಜನಪ್ಪ, ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್., ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಭದ್ರಾ ಮುಂಗಾರು ನೀರು: ಸಿಎಂ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರ

JanaNota Editor

ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಡಿಸಿ ಕಚೇರಿ ಮುತ್ತಿಗೆ ಯತ್ನ

JanaNota Editor

ವಿವಿಧ ಸ್ಪರ್ಧೆಗಳ ಮೂಲಕ ವಿಶಿಷ್ಟವಾಗಿ ಕೃಷ್ಣ ಜನ್ಮಾಷ್ಟಮಿ ಆಚರಣೆ

JanaNota Editor