ಶಿವಮೊಗ್ಗ: ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಅ.11ರಿಂದ 21ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.
ಉತ್ಸವದ ಅಂಗವಾಗಿ ಪ್ರತಿದಿನ ಮುಂಜಾನೆ 4.30ರಿಂದ ತೈಲಾಭಿಷೇಕ, ಶೈಲಪುತ್ರಿ ಹಾಗೂ ಬ್ರಹ್ಮಚಾರಿಣಿ ಆರಾಧನೆ, ಗುರುಗಳ ಆರಾಧನೆ, ಗಣಹೋಮ, ಕುಂಕುಮಾರ್ಚನೆ, ಪಂಚಾಮೃತಾಭಿಷೇಕ, ಮಹಾಭಿಷೇಕ ಮತ್ತು ಅಲಂಕಾರ ಪೂಜೆಗಳು ನಡೆಯಲಿವೆ. ಇದೇ ವೇಳೆ ದುರ್ಗಾ ಹವನ ಹಾಗೂ ಚಂಡಿಕಾ ಹೋಮವೂ ನೆರವೇರಲಿದೆ.
ಪ್ರತಿದಿನ ಮಧ್ಯಾಹ್ನ 12.30ಕ್ಕೆ ನೈವೇದ್ಯ, ಸಂಜೆ 7ಕ್ಕೆ ದುರ್ಗಾ ಪೂಜೆ, 7.30ಕ್ಕೆ ದೀಪೋತ್ಸವ ಹಾಗೂ ರಾತ್ರಿ 8ಕ್ಕೆ ಅಷ್ಟಾವಧಾನ ಸೇವೆ ಮತ್ತು ಮಂಗಳಾರತಿ ನಡೆಯಲಿದೆ. ಧರ್ಮಾಧಿಕಾರಿ ಎಸ್. ರಾಮಪ್ಪ ಅವರ ನೇತೃತ್ವದಲ್ಲಿ ನವರಾತ್ರಿ ಕಾರ್ಯಕ್ರಮಗಳು ಜರುಗಲಿವೆ.
10 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಂದ ‘ರಂಗ ನವರಾತ್ರಿ’
‘ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ರ ರಂಗ ಶಿಕ್ಷಣದತ್ತ’ ಯೋಜನೆಯಡಿ ಈ ಬಾರಿ ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ‘ರಂಗ ನವರಾತ್ರಿ’ ಕಾರ್ಯಕ್ರಮ ಆಯೋಜಿಸಲಾಗಿದೆ. 10 ಸರ್ಕಾರಿ ಶಾಲೆಗಳ ಒಟ್ಟು 210 ವಿದ್ಯಾರ್ಥಿಗಳು ಪ್ರತಿದಿನ ರಾತ್ರಿ 7ರಿಂದ 8ರವರೆಗೆ ನಾಟಕ ಪ್ರದರ್ಶನ ನೀಡಲಿದ್ದಾರೆ.
ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ನೆಲಕ್ಕೆ ಸಂಬಂಧಿಸಿದ 10 ಕಥೆಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಅವುಗಳಿಗೆ ರಂಗರೂಪ ನೀಡಲಿದ್ದಾರೆ. ನವರಾತ್ರಿ ಉತ್ಸವದ ಅವಧಿಯಲ್ಲಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಭಕ್ತರಿಗೆ ವಸತಿ, ದೇವಿಯ ದರ್ಶನ ಹಾಗೂ ನಿತ್ಯ ಪೂಜಾ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ತಿಳಿಸಿದ್ದಾರೆ.
