ಶಿವಮೊಗ್ಗ: ಶಿವಮೊಗ್ಗ ದಸರಾ ನಾಡಹಬ್ಬವನ್ನು ಈ ಬಾರಿ ಮತ್ತಷ್ಟು ವೈಭವ ಹಾಗೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ.
ದಸರಾ ಆಚರಣೆಗೆ 14 ಸಮಿತಿಗಳನ್ನು ರಚಿಸಲಾಗಿದ್ದು, ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹಕ್ಕೆ ಚಿನ್ನದ ಮುಖವಾಡ, ಪಾಲಿಕೆ ಕಟ್ಟಡಕ್ಕೆ ಲೇಸರ್ ಬೆಳಕಿನ ಅಲಂಕಾರ ಹಾಗೂ ನಾಣ್ಯ ಪ್ರದರ್ಶನ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ಹಾಗೂ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಹಾಗೂ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದರು.
ಮಂಗಳವಾರ ಪಾಲಿಕೆಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.11ರಂದು ಮಹಾನಗರ ಪಾಲಿಕೆ ಆವರಣದಿಂದ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ನಗರದ ಪ್ರಮುಖ ಮಾರ್ಗಗಳ ಮೂಲಕ ಸಾಗುವ ಮೆರವಣಿಗೆ ಕೋಟೆ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ಈ ವೇಳೆ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು ಎಂದರು.
ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಹೇಳಿದರು.
ನಟ ಶ್ರೀನಾಥ್ರಿಂದ ದಸರಾ ಉದ್ಘಾಟನೆ
ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ ಶ್ರೀನಾಥ್ ಆಗಮಿಸಲಿದ್ದಾರೆ. ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಮೆರವಣಿಗೆಗೆ ಗಜವೈಭವ
ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಹಾಗೂ ಸಾಗರ್ ಎಂಬ ಮೂರು ಆನೆಗಳು ಚಾಮುಂಡೇಶ್ವರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿವೆ. ಮೂರು ಆನೆಗಳ ಗಜವೈಭವ ದಸರಾ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದರು.
ದೇವಿಯ ಮುಖವಾಡವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಸುಮಾರು ₹1.5 ಕೋಟಿ ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ. ಈ ಬಾರಿ ಚಾಮುಂಡೇಶ್ವರಿ ದೇವಿಗೆ ಒಟ್ಟು ಆರು ಚಿನ್ನದ ಬಳೆಗಳನ್ನು ಅರ್ಪಿಸಲಾಗುವುದು ಎಂದು ಹೇಳಿದರು.
11 ದಿನಗಳ ದಸರಾ ಸಂಭ್ರಮ
ಈ ಬಾರಿ ದಸರಾ ಉತ್ಸವವನ್ನು 11 ದಿನಗಳ ಕಾಲ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ 10 ದಿನಗಳ ಕಾಲ ನಡೆಯುತ್ತಿದ್ದ ನವರಾತ್ರಿ ಹಾಗೂ ವಿಜಯದಶಮಿ ಉತ್ಸವವನ್ನು ಒಂದು ದಿನ ವಿಸ್ತರಿಸಲಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
200ಕ್ಕೂ ಹೆಚ್ಚು ದೇವರ ಉತ್ಸವಮೂರ್ತಿಗಳ ಮೆರವಣಿಗೆ
ಶಿವಮೊಗ್ಗ ದಸರಾ ಅಂಗವಾಗಿ ಕೋಟೆ ರಸ್ತೆಯ ಶಿವಪ್ಪನಾಯಕ ಅರಮನೆಯಿಂದ ಸಕಲ ದೇವಾನುದೇವತೆಗಳ ಭವ್ಯ ಮೆರವಣಿಗೆ ನಡೆಯಲಿದೆ. 200ಕ್ಕೂ ಹೆಚ್ಚು ದೇವಾಲಯಗಳ ಉತ್ಸವಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಇದು ರಾಜ್ಯದಲ್ಲೇ ವಿಶೇಷವಾಗಲಿದೆ ಎಂದು ತಿಳಿಸಿದರು.
ಅ.20ರಂದು ರವಿಚಂದ್ರನ್ರಿಂದ ಯುವ ದಸರಾ
ಅ.20ರಂದು ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಖ್ಯಾತ ಚಲನಚಿತ್ರ ನಟ ರವಿಚಂದ್ರನ್ ಭಾಗವಹಿಸಲಿದ್ದಾರೆ. ಅವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಯುವಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಒಟ್ಟಾರೆ, ಸಾಂಸ್ಕೃತಿಕ ವೈಭವ, ಧಾರ್ಮಿಕ ಆಚರಣೆ, ಮನರಂಜನೆ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಈ ಬಾರಿ ಶಿವಮೊಗ್ಗ ದಸರಾವನ್ನು ಅದ್ದೂರಿಯಾಗಿ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
