ಜನ ನೋಟ
ಶಿವಮೊಗ್ಗ

ಗ್ರಾಮೀಣ ಮಕ್ಕಳ ಅಪ್ರತಿಮ ಸಾಧನೆಗೆ ಜೆಎನ್‌ಎನ್‌ಸಿಇ ಸಾಕ್ಷಿ

ಶಿವಮೊಗ್ಗ: ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಪ್ರೋತ್ಸಾಹ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಜೆಎನ್‌ಎನ್‌ಸಿಇ ಒದಗಿಸಿದ ಅವಕಾಶಗಳು ಒಂದಾಗಿ ಬೆರೆತಾಗ ಸಾಧನೆಯ ಹಾದಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಜೆಎನ್‌ಎನ್‌ಸಿಇಯ ವಿಟಿಯು ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳ ಯಶೋಗಾಥೆ ಸಾಕ್ಷಿಯಾಯಿತು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಕಚೇರಿಯಲ್ಲಿ ಬುಧವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರ‍್ಯಾಂಕ್‌ ವಿಜೇತ ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸಾಧನೆಯ ಅನುಭವಗಳನ್ನು ಹಂಚಿಕೊಂಡರು.

ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಹಾಗೂ ಏಳು ಚಿನ್ನದ ಪದಕಗಳನ್ನು ಪಡೆದ ಧನ್ಯಶ್ರೀ ಬಿ.ಎಂ. ಮಾತನಾಡಿ, ಆಯನೂರು ಸಮೀಪದ ಸಿರಿಗೆರೆ ಗ್ರಾಮದವರಾದ ತಾವು ಪ್ರತಿದಿನ ಬಸ್‌ನಲ್ಲಿ ಕಾಲೇಜಿಗೆ ಪ್ರಯಾಣಿಸಿ ಶಿಕ್ಷಣ ಪಡೆದಿರುವುದಾಗಿ ತಿಳಿಸಿದರು. ಕೃಷಿಕರಾಗಿರುವ ಪೋಷಕರ ಪರಿಶ್ರಮ ಮತ್ತು ಪ್ರೋತ್ಸಾಹವೇ ತಮ್ಮ ಸಾಧನೆಗೆ ಪ್ರಮುಖ ಕಾರಣ ಎಂದರು. 9.44 ಸಿಜಿಪಿಎ ಗಳಿಸಿರುವ ತಾವು ಎಂಟು ಪದಕಗಳ ನಿರೀಕ್ಷೆಯಲ್ಲಿದ್ದೆ. ಪ್ರಸ್ತುತ ಕೆಪಿಟಿಸಿಎಲ್‌ನಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

ಎಲೆಕ್ಟ್ರಿಕಲ್‌ ಮತ್ತು ಟೆಲಿಕಮ್ಯುನಿಕೇಷನ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಪಡೆದ ನಯ್ಯರ್‌ ಫಾತಿಮಾ ಅಫ್ರೀನ್‌ ಅವರು ತರೀಕೆರೆ ತಾಲೂಕಿನವರಾಗಿದ್ದು, ತಂದೆ ಸರ್ಕಾರಿ ವಕೀಲರು ಹಾಗೂ ತಾಯಿ ಸರ್ಕಾರಿ ಶಿಕ್ಷಕಿಯಾಗಿದ್ದಾರೆ ಎಂದು ತಿಳಿಸಿದರು.

4ನೇ ರ‍್ಯಾಂಕ್‌ ಪಡೆದ ಯಶಸ್ಕರ ಟಿ.ಜಿ. ಶೃಂಗೇರಿಯವರಾಗಿದ್ದು, ತಂದೆ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. 5ನೇ ರ‍್ಯಾಂಕ್‌ ಪಡೆದ ಭೂಮಿಕಾ ಎಂ. ಸಾಗರದವರಾಗಿದ್ದು, ಜೆಎನ್‌ಎನ್‌ಸಿಇ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ಶಿಕ್ಷಣ ಪಡೆದಿರುವುದಾಗಿ ತಿಳಿಸಿದರು. ಪೋಷಕರು ಸಣ್ಣ ಕೈಗಾರಿಕೆ ನಡೆಸುತ್ತಿದ್ದು, ವಿದ್ಯಾಭ್ಯಾಸದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಕಾಲೇಜು ಉತ್ತಮ ಅವಕಾಶ ಕಲ್ಪಿಸಿದೆ ಎಂದರು.

6ನೇ ರ‍್ಯಾಂಕ್‌ ಪಡೆದ ಜಾರ್ಜ್‌ ಟಿ. ಪೌಲ್‌ ಅವರು ಎನ್.ಆರ್.ಪುರದ ಕೃಷಿಕ ಕುಟುಂಬದವರಾಗಿದ್ದು, ಪೋಷಕರ ಬೆಂಬಲವೇ ತಮ್ಮ ಸಾಧನೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

8ನೇ ರ‍್ಯಾಂಕ್‌ ಪಡೆದ ನಿತ್ಯಶ್ರೀ ಹೆಗಡೆ ಕೆ.ಎನ್. ತೀರ್ಥಹಳ್ಳಿಯ ರೈತಾಪಿ ಕುಟುಂಬದಿಂದ ಬಂದಿದ್ದು, ಸವಾಲಿನ ಬದುಕಿನ ನಡುವೆಯೂ ಜೆಎನ್‌ಎನ್‌ಸಿಇ ಉತ್ತಮ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಿದೆ ಎಂದರು. ಪ್ರಸ್ತುತ ಟಿಸಿಎಸ್‌ ಕಂಪನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವುದಾಗಿ ಸಂತಸ ಹಂಚಿಕೊಂಡರು.

10ನೇ ರ‍್ಯಾಂಕ್‌ ಪಡೆದ ಸ್ವಾತಿ ಎಸ್.ಜಿ. ಅವರು ನ್ಯಾಮತಿ ತಾಲೂಕಿನ ಬಸವನಹಳ್ಳಿಯ ಕೃಷಿ ಹಿನ್ನೆಲೆಯ ಕುಟುಂಬದವರಾಗಿದ್ದು, ಜೆಎನ್‌ಎನ್‌ಸಿಇ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ವಿದ್ಯಾಭ್ಯಾಸ ನಡೆಸಿರುವುದಾಗಿ ತಿಳಿಸಿದರು.

ಸ್ಥಳೀಯವಾಗಿಯೇ ಗುಣಮಟ್ಟದ ಶಿಕ್ಷಣ

ಜೆಎನ್‌ಎನ್‌ಸಿಇ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಮಾತನಾಡಿ, ಮಲೆನಾಡಿನ ವಿದ್ಯಾರ್ಥಿಗಳು ಪಿಯುಸಿ ನಂತರ ಉನ್ನತ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ತೆರಳುವ ಅಗತ್ಯವಿಲ್ಲದಂತೆ, ತಮ್ಮದೇ ಪ್ರದೇಶದಲ್ಲಿ ಉತ್ಕೃಷ್ಟ ಶಿಕ್ಷಣ ಮತ್ತು ಉತ್ತಮ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿ ಜೆಎನ್‌ಎನ್‌ಸಿಇಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಲಾಗುತ್ತಿದ್ದು, ಅವರ ಸಾಮರ್ಥ್ಯ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಸ್ಟಾರ್ಟ್‌ಅಪ್‌ಗಳನ್ನು ರೂಪಿಸಲು ಅಗತ್ಯವಾದ ಪ್ರೇರಕ ವಾತಾವರಣವನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಕಾಲೇಜಿನ 40 ವಿದ್ಯಾರ್ಥಿಗಳು ವಿಟಿಯು ಬಿ.ಇ. ಆನರ್ಸ್‌ ಪದವಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸ್ವಯಂ–ಎನ್‌ಪಿಟಿಇಎಲ್‌ ಪ್ರಮಾಣಪತ್ರ ಕಾರ್ಯಕ್ರಮದಲ್ಲೂ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು 1,315 ವಿದ್ಯಾರ್ಥಿಗಳು ಎನ್‌ಪಿಟಿಇಎಲ್‌ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್, ಖಜಾಂಚಿ ಡಿ.ಜಿ. ರಮೇಶ್, ನಿರ್ದೇಶಕರಾದ ಪಿ. ಮೈಲಾರಪ್ಪ, ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಎಂ.ಎಸ್. ಅನಂತದತ್ತ, ಜಿ.ಎನ್. ಸುಧೀರ್, ಕುಲಸಚಿವ ಎನ್‌.ಕೆ. ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಪರಿಸರ ಸೂಕ್ಷ್ಮ ವಲಯದಲ್ಲಿ ಯೋಜನೆ, ₹380 ಕೋಟಿ ಪಾವತಿ ಆರೋಪ : ಈಶ್ವರಪ್ಪ ಕಿಡಿ

JanaNota Editor

ಆ.16ರಂದು ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

JanaNota Editor

ಕ್ರೀಡೆಯಿಂದ ಬದುಕಿನಲ್ಲಿ ಯಶಸ್ಸು ಸಾಧ್ಯ : ಮೋಹನ್ ಕುಮಾರ್

JanaNota Editor