ಶಿವಮೊಗ್ಗ: ರಾಜ್ಯ ಸರ್ಕಾರ ಹಾಗೂ ಪಕ್ಷದ ಹಿರಿಯರು ತಮ್ಮ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ಧಕ್ಕೆ ಬಾರದಂತೆ ಶಿವಮೊಗ್ಗ-ಭದ್ರಾವತಿ ಅವಳಿನಗರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷ ಸಿ.ಜಿ. ಮಧುಸೂದನ್ ಹೇಳಿದರು.
ನಗರದ ಸೂಡಾ ಕಚೇರಿಯಲ್ಲಿ ಪಕ್ಷದ ಹಿರಿಯರು, ಕಾರ್ಯಕರ್ತರು ಹಾಗೂ ನೂರಾರು ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲೇ ಎನ್ಎಸ್ಯುಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಆ ಸಂದರ್ಭದಲ್ಲಿ ಹಲವು ಪ್ರಕರಣಗಳನ್ನು ಎದುರಿಸಿದ್ದರಿಂದ ತಂದೆ-ತಾಯಿಗೆ ಬೇಸರವಾಗುತ್ತಿತ್ತು. ಆದರೆ ಇಂದು ದೊರೆತಿರುವ ಜವಾಬ್ದಾರಿಯಿಂದ ಅವರಲ್ಲಿ ಸಂತಸ ಮೂಡಿರುವುದು ತಮ್ಮ ಬದುಕಿಗೆ ಸಮಾಧಾನ ತಂದಿದೆ ಎಂದು ಹೇಳಿದರು.
ಸೂಡಾ ಅಧ್ಯಕ್ಷ ಹುದ್ದೆ ದೊರೆಯಲು ಸಾಕಷ್ಟು ಶ್ರಮವಿದೆ. ಪಕ್ಷದಲ್ಲಿ ನಿಷ್ಠೆಯಿಂದ ದುಡಿದವರಿಗೆ ಹಾಗೂ ಪಕ್ಷ ಸಂಘಟನೆಗಾಗಿ ಶ್ರಮಿಸಿದವರಿಗೆ ಅವಕಾಶ ದೊರೆಯುತ್ತದೆ ಎಂಬುದಕ್ಕೆ ತಾನೇ ಸಾಕ್ಷಿ ಎಂದ ಅವರು, ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹಾಗೂ ಜನಮುಖಿಯಾಗಿ ನಿರ್ವಹಿಸುವುದಾಗಿ ತಿಳಿಸಿದರು.
ಅಲ್ಲದೆ ಪಕ್ಷದ ಯುವಕರಿಗೆ ಸ್ಫೂರ್ತಿಯಾಗುವ ರೀತಿಯಲ್ಲಿ ಕೆಲಸ ಮಾಡುವುದಾಗಿ ಮಧುಸೂದನ್ ಹೇಳಿದರು.
ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ ಮಾತನಾಡಿ, ತಾವು ಎನ್ಎಸ್ಯುಐ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಮಧುಸೂದನ್ ಅವರೇ ಕಾರಣರಾಗಿದ್ದಾರೆ. ಅವರಿಗೆ ಪ್ರಮುಖ ಜವಾಬ್ದಾರಿ ದೊರೆಯಬೇಕೆಂಬ ತಮ್ಮ ಆಶಯ ಈಡೇರಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಖಾನ್, ಭದ್ರಾವತಿ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಸಿ.ಎಂ. ಖಾದರ್ ಸೇರಿದಂತೆ ಹಲವರು ಮಾತನಾಡಿ ಮಧುಸೂದನ್ ಅವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೈಕ್ ರ್ಯಾಲಿ ಮೂಲಕ ಅದ್ಧೂರಿ ಸ್ವಾಗತ
ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಬೈಕ್ ರ್ಯಾಲಿ ಮೂಲಕ ನೂತನ ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್ ಅವರನ್ನು ಸೂಡಾ ಕಚೇರಿಗೆ ಕರೆತರಲಾಯಿತು. ಎನ್ಎಸ್ಯುಐ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಸೂಡಾ ಕಚೇರಿ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.
