ಜನ ನೋಟ
ಶಿವಮೊಗ್ಗ

ಆಶ್ರಯ ಮನೆಗಳ ವಿತರಣೆ ವಿಳಂಬ : ಅ.27ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

ಶಿವಮೊಗ್ಗ: ಸ್ಥಗಿತಗೊಂಡಿರುವ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪುನರಾರಂಭಿಸಿ, ಅರ್ಹ ಬಡ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ವಿತರಿಸಬೇಕೆಂದು ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಅ.27ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಳಗದ ಮುಖಂಡ ಕೆ.ಇ. ಕಾಂತೇಶ್, ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಯೋಜನೆಯಡಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡುವ ಯೋಜನೆ 2017ರಲ್ಲಿ ಆರಂಭವಾಗಿತ್ತು.

ಗೋವಿಂದಾಪುರದಲ್ಲಿ 3,000 ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1,300 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಆದರೆ ಯೋಜನೆ ಆರಂಭವಾಗಿ ಒಂಬತ್ತು ವರ್ಷಗಳು ಕಳೆದರೂ ಇದುವರೆಗೆ ಕೇವಲ 463 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಮನೆಗಾಗಿ ಅರ್ಹ ಫಲಾನುಭವಿಗಳು ಸಾಲ ಮಾಡಿಕೊಂಡು, ಮನೆಯಲ್ಲಿದ್ದ ಒಡವೆ ಹಾಗೂ ಮಂಗಳಸೂತ್ರಗಳನ್ನು ಅಡಮಾನವಿಟ್ಟು ತಲಾ ₹80 ಸಾವಿರ ಪಾವತಿಸಿದ್ದಾರೆ. ಹಣ ಪಾವತಿಸಿ ಒಂಬತ್ತು ವರ್ಷ ಕಳೆದರೂ ಅವರಿಗೆ ಸೂರು ಕಲ್ಪಿಸಲು ಸರ್ಕಾರ ವಿಫಲವಾಗಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗೋವಿಂದಾಪುರದಲ್ಲಿ ಮನೆ ನಿರ್ಮಾಣದ ಗುತ್ತಿಗೆ ಪಡೆದಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಸರ್ಕಾರದಿಂದ ಸುಮಾರು ₹15 ಕೋಟಿ ಬಾಕಿ ಇರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ, ಯಂತ್ರೋಪಕರಣಗಳು ಹಾಗೂ ಕಾರ್ಮಿಕರನ್ನು ಸ್ಥಳಾಂತರಿಸಿರುವುದರಿಂದ ಮನೆಗಳ ನಿರ್ಮಾಣ ಕಾರ್ಯ ಸಂಪೂರ್ಣ ನೆನೆಗುದಿಗೆ ಬಿದ್ದಿದೆ ಎಂದು ಕಾಂತೇಶ್ ಹೇಳಿದರು.

ಅದೇ ರೀತಿ ಗೋಪಿಶೆಟ್ಟಿಕೊಪ್ಪದ ಮನೆಗಳ ನಿರ್ಮಾಣ ಕಾರ್ಯ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಡೆಯಬೇಕಿತ್ತು. ಕಾಮಗಾರಿಯ ಪ್ರಗತಿ ಕುರಿತು ನಿಗಮದ ಅಧಿಕಾರಿಗಳನ್ನು ವಿಚಾರಿಸಿದಾಗ ಸಮರ್ಪಕ ಮಾಹಿತಿ ನೀಡದೆ ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಆಶ್ರಯ ಮನೆಗಳ ಕಾಮಗಾರಿಯನ್ನು ತಕ್ಷಣ ಪುನರಾರಂಭಿಸಿ, ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಬೇಕು. ಇಲ್ಲವಾದರೆ ಅ.27ರಂದು ನಡೆಯುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಅವರು ಎಚ್ಚರಿಸಿದರು.

Related posts

ಅ.8, 9ರಂದು ನೀನಾಸಂ ನಾಟಕೋತ್ಸವ

JanaNota Editor

ರೈಲ್ವೆ ನಿಲ್ದಾಣದೆದುರು ಸಿಟಿ ಬಸ್ ತಡೆದು ಪ್ರತಿಭಟನೆ

JanaNota Editor

2018ರ ಮತದಾರರ ಹೆಚ್ಚಳದ ಬಗ್ಗೆ ತನಿಖೆಯಾಗಲಿ : ಕೆ.ಬಿ. ಪ್ರಸನ್ನಕುಮಾರ್

JanaNota Editor