ಜನ ನೋಟ
ರಾಜ್ಯ

‘ಎ’ ಸಿನಿಮಾ ನಿರ್ಮಿಸಿದ್ದ ಖ್ಯಾತ ನಿರ್ಮಾಪಕ ಸಿಲ್ಕ್ ಮಂಜು ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಿರ್ಮಾಪಕ ಸಿಲ್ಕ್ ಮಂಜು (65) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದು, ಅವರ ನಿಧನಕ್ಕೆ ಚಂದನವನದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಕಳೆದ ಕೆಲ ಸಮಯದಿಂದ ಸಿಲ್ಕ್ ಮಂಜು ಅವರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ನಿರಂತರವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಅವರಿಗೆ ಇತ್ತೀಚೆಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿತ್ತು. ಆದರೆ, ಕಸಿ ಮಾಡಲಾದ ಕಿಡ್ನಿ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳದ ಕಾರಣ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.

‘ಎ’ ಸಿನಿಮಾ ಮೂಲಕ ದೊಡ್ಡ ಯಶಸ್ಸು

1998ರಲ್ಲಿ ಬಿಡುಗಡೆಯಾದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಎ’ ಸಿನಿಮಾವನ್ನು ಸಿಲ್ಕ್ ಮಂಜು ನಿರ್ಮಿಸಿದ್ದರು. ಉಪೇಂದ್ರ ಅವರ ವಿಭಿನ್ನ ಕಥೆ ನಿರೂಪಣೆ ಹಾಗೂ ಗುರುಕಿರಣ್ ಅವರ ಸಂಗೀತದಿಂದ ಗಮನ ಸೆಳೆದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.

ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿದ್ದಲ್ಲದೆ, ತೆಲುಗು ಭಾಷೆಗೂ ಡಬ್ ಆಗಿತ್ತು. ಈ ಸಿನಿಮಾ ಉಪೇಂದ್ರ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡುವುದರ ಜೊತೆಗೆ ನಿರ್ಮಾಪಕ ಸಿಲ್ಕ್ ಮಂಜು ಅವರಿಗೂ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿಕೆ

‘ಎ’ ಚಿತ್ರದ ಯಶಸ್ಸಿನ ಬಳಿಕ ಸಿಲ್ಕ್ ಮಂಜು ಅವರು ‘ಪ್ರತ್ಯರ್ಥ’, ‘ಹಗಲು ವೇಷ’, ‘ಸೂರ್ಯಕಾಂತಿ’, ‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಸೈಕಿಕ್’ ಹಾಗೂ ‘ಟೆರರ್’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ಅವರು, ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು.

ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಹಿರಿಯ ನಿರ್ಮಾಪಕರನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಗೆ ಚಂದನವನದ ಅನೇಕರು ಸಂತಾಪ ಸೂಚಿಸಿದ್ದಾರೆ.

Related posts

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು ಎ-14 ಪ್ರದೋಷ್ ಅರ್ಜಿ : ನಟ ದರ್ಶನ್‌ಗೆ ಹೆಚ್ಚಿದ ಸಂಕಷ್ಟ..!

JanaNota Editor

ಅರಮನೆ ಜಾಗ ಸರ್ಕಾರದ್ದು, ರಾಜವಂಶಸ್ಥರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ ಅಷ್ಟೇ: ಸಚಿವ ಯತೀಂದ್ರ ಸಿದ್ದರಾಮಯ್ಯ

JanaNota Editor

ಶಿವಮೊಗ್ಗ ಗ್ರಾಮಾಂತರದ ಕೆರೆಗಳಿಗೆ ಕೊಳವೆ ಮಾರ್ಗದ ಮೂಲಕ ನೀರು : ₹22.42 ಕೋಟಿ ಯೋಜನೆಗೆ ತುರ್ತು ಅನುಮೋದನೆಗೆ ಮನವಿ

JanaNota Editor