ಜನ ನೋಟ
ಶಿವಮೊಗ್ಗ

ಎಸ್. ಚಂದ್ರಕಾಂತ್, ಜೇಸುದಾಸ್‌ಗೆ ಒಲಿದ ಪ್ರಶಸ್ತಿಯ ಸಂಭ್ರಮ : ಶಿವಮೊಗ್ಗದಲ್ಲಿ ಆತ್ಮೀಯ ಸನ್ಮಾನ

ಶಿವಮೊಗ್ಗ : ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದ ಹಿರಿಯ ಪತ್ರಕರ್ತರಾದ ಎಸ್. ಚಂದ್ರಕಾಂತ್ ಹಾಗೂ ಜೇಸುದಾಸ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಮತ್ತು ಪತ್ರಕರ್ತರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಇಬ್ಬರೂ ಹಿರಿಯ ಪತ್ರಕರ್ತರು ತಮ್ಮ ವೃತ್ತಿಬದುಕಿನ ಅನುಭವಗಳನ್ನು ಹಂಚಿಕೊಂಡು, ಸಹೋದ್ಯೋಗಿಗಳ ಪ್ರೀತಿ, ಅಭಿಮಾನ ಹಾಗೂ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.

ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕರೂ ಆಗಿರುವ ಎಸ್. ಚಂದ್ರಕಾಂತ್ ಅವರು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ನೀಡುವ ಜೀವಮಾನ ಸಾಧನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿವಿಧ ಮಾನದಂಡಗಳ ಆಧಾರದಲ್ಲಿ ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಅದರೊಂದಿಗೆ ಸಹೋದ್ಯೋಗಿಗಳು ಆತ್ಮೀಯವಾಗಿ ಸನ್ಮಾನಿಸಿರುವುದು ಮತ್ತಷ್ಟು ಸಂತೋಷ ನೀಡಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಜೇಸುದಾಸ್ ಅವರು ದಕ್ಷಿಣ ಭಾರತದ ಪ್ರತಿಷ್ಠಿತ ದಿ ನ್ಯೂ ಇಂಡಿಯನ್ ಟೈಮ್ಸ್ ಮಾಧ್ಯಮ ಪ್ರಶಸ್ತಿಗೆ ಭಾಜನರಾಗಿದ್ದು, ಪತ್ರಿಕಾ ಮಿತ್ರರ ಪ್ರೀತಿ ಹಾಗೂ ಗೌರವ ತಮ್ಮ ಸಂತೋಷವನ್ನು ಹೆಚ್ಚಿಸಿದೆ. ಆತ್ಮೀಯವಾಗಿ ಸನ್ಮಾನಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಹಿರಿಯ ಪತ್ರಕರ್ತರ ಸಾಧನೆ ಯುವಜನತೆಗೆ ಪ್ರೇರಣೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ ಮಾತನಾಡಿ, ಪತ್ರಕರ್ತರ ವೃತ್ತಿಬದುಕಿನಲ್ಲಿ ಪ್ರಶಸ್ತಿಗಳು ಹೊಸ ಚೈತನ್ಯ ತುಂಬುತ್ತವೆ. ಇಬ್ಬರೂ ಹಿರಿಯ ಪತ್ರಕರ್ತರ ಸಾಧನೆಗಳು ಹೊಸ ತಲೆಮಾರಿನ ಪತ್ರಕರ್ತರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ವರದಿಗಾರ ರಾಮಚಂದ್ರ ಗುಣಾರಿ ಮಾತನಾಡಿ, ಇಬ್ಬರೂ ಬಹುಮುಖ ವ್ಯಕ್ತಿತ್ವದವರು. ವೃತ್ತಿಯಲ್ಲಿನ ಸಾಧನೆ, ಅನುಭವ ಹಾಗೂ ವಿಶಿಷ್ಟ ಕಾರ್ಯಶೈಲಿಯಿಂದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಹಿರಿಯ ಪತ್ರಕರ್ತರಾದ ಹೊನ್ನಾಳಿ ಚಂದ್ರಶೇಖರ್ ಹಾಗೂ ಸಂತೋಷ ಕಾಚಿನಕಟ್ಟೆ ಮಾತನಾಡಿ, ಇಬ್ಬರು ಹಿರಿಯ ಪತ್ರಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿರುವುದು ಇಡೀ ಪತ್ರಿಕಾ ಬಳಗಕ್ಕೆ ಸಂಭ್ರಮದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ ಹಾಗೂ ಗಿರೀಶ್ ಉಮ್ರಾಯ್ ಅವರು ಎಸ್. ಚಂದ್ರಕಾಂತ್ ಅವರ ವೃತ್ತಿಜೀವನದ ಕೊಡುಗೆಗಳನ್ನು ಸ್ಮರಿಸಿ, ಜೇಸುದಾಸ್ ಅವರ ಜನಪರ ಕಾಳಜಿಯ ಪತ್ರಿಕೋದ್ಯಮವನ್ನು ಪ್ರಶಂಸಿಸಿದರು.

ಜಿಲ್ಲಾ ಶಾಖೆಯ ಅಧ್ಯಕ್ಷ ಎಚ್.ಯು. ವೈದ್ಯನಾಥ್ ಅವರು ಎಸ್. ಚಂದ್ರಕಾಂತ್ ಅವರ ವೃತ್ತಿಬದುಕು ಹಾಗೂ ಸಾಧನೆಗಳನ್ನು ಪರಿಚಯಿಸಿ, ಇಬ್ಬರಿಗೂ ದೊರೆತ ಗೌರವಗಳು ಹೊಸ ತಲೆಮಾರಿನ ಪತ್ರಕರ್ತರಿಗೆ ಸ್ಫೂರ್ತಿಯಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಭರತ್ ರಾಜ್ ಸಿಂಗ್, ರಾಜೇಶ್ ಕಾಮತ್, ಆರುಂಡಿ ಶ್ರೀನಿವಾಸ ಮೂರ್ತಿ, ವಿ.ಟಿ. ಅರುಣ್, ರಘುಶೆಟ್ಟಿ, ಯೋಗೀಶ್, ಪುನೀತ್, ಚಿನ್ನು, ಹಾಲೇಶ್, ರಘುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ಶಾಖೆಯ ಉಪಾಧ್ಯಕ್ಷ ದೇಶಾದ್ರಿ ಹೊಸ್ಮನೆ ಕಾರ್ಯಕ್ರಮ ನಿರೂಪಿಸಿದರು.

Related posts

ಶಿವಮೊಗ್ಗದಲ್ಲಿ ಶುರುವಾಯ್ತು ‘ಟಾಕ್ಸಿಕ್’ ಹವಾ

JanaNota Editor

ಸಚಿವ ಸ್ಥಾನ ಸಿಗದ ಬೇಸರ: ‘ಜನತೆ ಹೇಳಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ’ ಎಂದ ಸಂಗಮೇಶ್ವರ್

JanaNota Editor

ಎಸ್‌ಐಆರ್ ಪರಿಷ್ಕರಣೆಯಲ್ಲಿ 56,725 ಮತದಾರರ ಹೆಸರು ಕೈಬಿಡುವ ಆತಂಕ

JanaNota Editor