ಮೈಸೂರು: ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್ ಅವರು ಈ ಬಾರಿಯ ಮೈಸೂರು ದಸರಾ ಮಹೋತ್ಸವದ ವೇಳೆ ಉಂಟಾದ ಸಮನ್ವಯದ ಕೊರತೆ, ಭದ್ರತಾ ಲೋಪಗಳು ಹಾಗೂ ರಾಜಮನೆತನದ ಧಾರ್ಮಿಕ ವಿಧಿವಿಧಾನಗಳಿಗೆ ಅಡಚಣೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಪ್ರಮೋದಾದೇವಿ ಒಡೆಯರ್ ಅವರು ಹೇಳಿರುವ ಸಮಸ್ಯೆ ಬಗೆಹರಿಸುತ್ತೇವೆ. ಆದರೆ, ಅವರು ಹೇಳಿರುವುದನ್ನೆಲ್ಲಾ ಒಪ್ಪಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋದಾದೇವಿ ಒಡೆಯರ್ ಅವರು ಹೇಳಿದಂತೆ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ಸರ್ಕಾರದ್ದು ದಸರಾ ಅಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಸರ್ಕಾರದ ದಸರೆಗೂ ಇತಿಹಾಸ ಇದೆ. ಅದನ್ನು ದಸರಾ ಅಲ್ಲ ಎಂಬುದನ್ನು ನಾವು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಅರಮನೆ ಮಂಡಳಿ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ. ಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅಂಬಾರಿಗೂ ಸರ್ಕಾರ ದುಡ್ಡು ಕೊಡುತ್ತದೆ.
ಅವರಿಗೆ ಏನಾದರೂ ಸಮಸ್ಯೆ ಇದ್ದಿದ್ದರೆ ಸರ್ಕಾರಕ್ಕೆ ನೇರವಾಗಿ ಹೇಳಬಹುದಿತ್ತು. ನಾವು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದೆವು. ನಮ್ಮ ಗಮನಕ್ಕೆ ಏನನ್ನೂ ತಂದಿಲ್ಲ. ಏಕಾಏಕಿ ಮಾಧ್ಯಮಗಳಿಗೆ ಪತ್ರ ಬರೆದರೆ ಹೇಗೆ? ಅವರು ಸರ್ಕಾರಕ್ಕೇನೂ ಪತ್ರ ಬರೆದಿಲ್ಲ ಎಂದು ಹೇಳಿದ್ದಾರೆ.
ಅಗತ್ಯವಿದರೆ ನಾವು ಕೆಲವರನ್ನು ಸರ್ಕಾರದಿಂದ ಅವರ ಬಳಿಗೆ ಕಳುಹಿಸುತ್ತೇವೆ. ಮುಖ್ಯಮಂತ್ರಿಯವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ. ಏನು ಸಮಸ್ಯೆಯಾಗಿದೆ ಎಂಬುದನ್ನು ಬೇಕಿದ್ದರೆ ಚರ್ಚೆ ಮಾಡುತ್ತೇವೆ ಎಂದರು.
ಅಂಬಾರಿ ಆನೆ ಯಾವುದು ಎಂಬುದನ್ನು ಅವರಿಗೆ ಹೇಳುವ ಅವಶ್ಯಕತೆ ಕಾನೂನು ಪ್ರಕಾರ ಇಲ್ಲ. ಅಂಬಾರಿ ಆನೆ ತೀರ್ಮಾನ ಆಗಿದ್ದೇ ಕೊನೆ ಗಳಿಗೆಯಲ್ಲಿ. ಮೊದಲು ಮಹೇಂದ್ರ ಆಮೇಲೆ ಧನಂಜಯ ಎಂದರು, ಆಮೇಲೆ ಪ್ರಶಾಂತ ಎಂದರು.
ಇಲ್ಲೇ ಸ್ವಲ್ಪ ಗೊಂದಲ ಇತ್ತು. ಹೀಗಾಗಿ ಆಯ್ಕೆ ತಡವಾಗಿದೆ. ಅವರಿಗೆ ಅಂಬಾರಿ ಆನೆ ಯಾವುದು ಎಂಬುದನ್ನು ಹೇಳುವ ಅಗತ್ಯ ಇಲ್ಲ ಎಂದರು.
ಜಟ್ಟಿ ಕಾಳಗ ರದ್ದಾದ ವಿಚಾರದಲ್ಲಿ ಪ್ರಮೋದಾದೇವಿ ಒಡೆಯರ್ ಅವರು ಪತ್ರದಲ್ಲಿ ಉಲ್ಲೇಖ ಮಾಡಿರುವುದು ಒಂದು. ಪೊಲೀಸರು ಹೇಳುತ್ತಿರುವುದೊಂದು. ಜಟ್ಟಿಗಳೇ ತಡವಾಗಿ ಬಂದರು, ನಮ್ಮಿಂದೇನೂ ತೊಂದರೆ ಆಗಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಇದನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಿ ತಪ್ಪಾಗಿದೆ ಎಂಬುದನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
