ಜನ ನೋಟ
ರಾಜ್ಯ

ಸೆ. 11ರಿಂದ 18ರವರೆಗೆ ಮೈಸೂರು ಸ್ಯಾಂಡಲ್ ಸಾಬೂನು ಮೇಳ

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಂಗಪ್ಪ

ಶಿವಮೊಗ್ಗ: ಕರ್ನಾಟಕ ಸರ್ಕಾರದ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವತಿಯಿಂದ ಸೆ. 11ರಿಂದ 18ರವರೆಗೆ ಸಾಗರ ರಸ್ತೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆ ಎದುರಿನ ಪೊಲೀಸ್ ಭವನದಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಂಗಪ್ಪ ತಿಳಿಸಿದರು.

ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾಬೂನು ಸಂಸ್ಥೆಯು ಮೈಸೂರು ಸ್ಯಾಂಡಲ್ ಹೆಸರಿನಿಂದ ವಿಶ್ವವಿಖ್ಯಾತಿ ಪಡೆದಿದೆ. ಸಂಸ್ಥೆಯ ವತಿಯಿಂದ ಸಾಬೂನು, ಅಗರಬತ್ತಿ, ಸೌಂದರ್ಯವರ್ಧಕಗಳು, ಶ್ರೀಗಂಧದ ಎಣ್ಣೆ, ಮಾರ್ಜಕ ಸೇರಿದಂತೆ 80ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಮೇಳದಲ್ಲಿ ಸಂಸ್ಥೆಯ ಎಲ್ಲ ಬಗೆಯ ಉತ್ಪನ್ನಗಳನ್ನು ಪ್ರದರ್ಶಿಸುವುದರ ಜತೆಗೆ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿವಿಧ ಬಗೆಯ ಸಾಬೂನುಗಳು, ಸೌಂದರ್ಯವರ್ಧಕಗಳು ಹಾಗೂ ಅಗರಬತ್ತಿಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಮೇಳವು ಪ್ರತಿದಿನ ಬೆಳಗ್ಗೆ 9.30ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

110 ವರ್ಷಗಳ ಭವ್ಯ ಪರಂಪರೆ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಮೈಸೂರು ಮಹಾರಾಜರ ಅಪೇಕ್ಷೆಯಂತೆ ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ರಸಾಯನಶಾಸ್ತ್ರಜ್ಞ ಎಸ್.ಜಿ. ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಆರಂಭವಾಯಿತು. ಇದೀಗ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ. ಸಂಸ್ಥೆಗೆ ಸುಮಾರು 110 ವರ್ಷಗಳ ಭವ್ಯ ಪರಂಪರೆ ಇದೆ ಎಂದು ಗಂಗಪ್ಪ ಹೇಳಿದರು.

ಮೈಸೂರು ಸ್ಯಾಂಡಲ್ ಸಾಬೂನು ವಿಶ್ವದರ್ಜೆಯ ಉತ್ಪನ್ನವಾಗಿದ್ದು, ಐಎಸ್‌ಒ ಸೇರಿದಂತೆ ಹಲವು ಗುಣಮಟ್ಟದ ಪ್ರಮಾಣಪತ್ರಗಳನ್ನು ಪಡೆದಿದೆ. 2025-26ನೇ ಸಾಲಿನಲ್ಲಿ ಸಂಸ್ಥೆಯು ₹2,016 ಕೋಟಿ ವಹಿವಾಟು ನಡೆಸಿ ₹522 ಕೋಟಿ ನಿವ್ವಳ ಲಾಭ ಗಳಿಸಿದೆ. 2026ರ ಆಗಸ್ಟ್ ವೇಳೆಗೆ ₹780 ಕೋಟಿ ವಹಿವಾಟು ನಡೆದಿದೆ ಎಂದರು.

2017ನೇ ಸಾಲಿನಿಂದ ಕೆಎಸ್‌ಡಿಎಲ್ ಸಂಸ್ಥೆಯು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇತ್ತೀಚೆಗೆ 20ಕ್ಕೂ ಹೆಚ್ಚು ಹೊಸ ಬಗೆಯ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶ್ವದ ಸುಮಾರು 25 ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದ್ದು, ವಾರ್ಷಿಕವಾಗಿ ಸುಮಾರು ₹25 ಕೋಟಿ ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದರು.

ಶ್ರೀಗಂಧ ಬೆಳೆಸಲು ರೈತರಿಗೆ ಪ್ರೋತ್ಸಾಹ

ಕೆಎಸ್‌ಡಿಎಲ್ ಶಾಖಾ ವ್ಯವಸ್ಥಾಪಕಿ ಸುಷ್ಮಾ ಮಾತನಾಡಿ, ಸಂಸ್ಥೆಗೆ ನಿರಂತರವಾಗಿ ಶ್ರೀಗಂಧ ಲಭ್ಯವಾಗುವಂತೆ ಪರಿಸರ ನೀತಿಯಡಿ ‘ಹೆಚ್ಚು ಹೆಚ್ಚು ಶ್ರೀಗಂಧ ಬೆಳೆಸಿ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ರಾಜ್ಯದ ವಿವಿಧ ಭಾಗಗಳ ಸುಮಾರು 750ಕ್ಕೂ ಹೆಚ್ಚು ರೈತರನ್ನು ಭೇಟಿ ಮಾಡಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಇದಲ್ಲದೆ, ಶ್ರೀಗಂಧ ಬೆಳೆಸಲು ಆಸಕ್ತಿ ಹೊಂದಿರುವ ಯಾರೇ ಆಗಲಿ ಸಂಸ್ಥೆಯನ್ನು ಸಂಪರ್ಕಿಸಿದರೆ, ಅವರಿಗೆ ಸಂಸ್ಥೆಯ ವತಿಯಿಂದ ಅಗತ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಸುರೇಶ್ ಹಾಗೂ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

Related posts

ಪವಿತ್ರಾ ಗೌಡ ಭುಜದ ಮೇಲೆ ಕೈ ಹಾಕಿ “ಇವಳು ನನ್ನ ಹೆಂಡ್ತಿ” ಎಂದಿದ್ದರಂತೆ ದರ್ಶನ್

JanaNota Editor

ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯದ ಬಗ್ಗೆ ಅಜ್ಜಯ್ಯ ಮಹತ್ವದ ಭವಿಷ್ಯವಾಣಿ

JanaNota Editor

ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ

JanaNota Editor