ಜನ ನೋಟ
Headlines

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ: ಕಾನೂನು ಕ್ರಮಕ್ಕೆ ಸೂಚನೆ

ಬೆಂಗಳೂರು : ಕರ್ನಾಟಕದಲ್ಲೂ ಡೇರಿ ಹೊಂದಿರುವ ‘ದೊಡ್ಲ ಡೈರಿ ಲಿಮಿಟೆಡ್‌’ಗೆ ಸಂಬಂಧಿಸಿದ ಫುಲ್ ಕ್ರೀಮ್ ಹಾಲಿನ ಮಾದರಿಯಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಪತ್ತೆಯಾಗಿದ್ದು, ಈ ಉತ್ಪನ್ನದ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಹಾಲಿನ ಮಾದರಿಯ ಪರೀಕ್ಷೆಯಲ್ಲಿ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಲಾಗಿದೆ.

ಪ್ರಯೋಗಾಲಯ ಪರೀಕ್ಷೆಯಲ್ಲಿ ಲೋಪ ದೃಢ

ದೊಡ್ಲ ಡೈರಿ ಲಿಮಿಟೆಡ್‌ನ ಫುಲ್ ಕ್ರೀಮ್ ಹಾಲಿನ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷೆಗೆ ಸಂಗ್ರಹಿಸಿದ್ದರು. ಮೊದಲ ಹಂತದ ಪರೀಕ್ಷೆಯಲ್ಲಿ ಹಾಲಿನಲ್ಲಿನ ಕೊಬ್ಬಿನ ಅಂಶವು ಆಹಾರ ಸುರಕ್ಷತಾ ನಿಯಮಗಳಲ್ಲಿ ನಿಗದಿಪಡಿಸಿರುವ ಮಾನದಂಡಕ್ಕೆ ಹೊಂದಿಕೆಯಾಗದ ಕಾರಣ ಅದನ್ನು ಕಳಪೆ ಗುಣಮಟ್ಟದ ಉತ್ಪನ್ನ ಎಂದು ಗುರುತಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಆಹಾರ ಉದ್ಯಮದ ಸಂಸ್ಥೆ ಮೇಲ್ಮನವಿ ಸಲ್ಲಿಸಿದ ಬಳಿಕ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು. ಅಲ್ಲಿನ ಪರೀಕ್ಷೆಯಲ್ಲಿ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಇರುವುದನ್ನು ದೃಢಪಡಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ. ಅಲ್ಲದೆ, ಹಾಲಿನಲ್ಲಿನ ಕೊಬ್ಬಿನ ಅಂಶವೂ ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆ ಇರುವುದು ಪತ್ತೆಯಾಗಿದೆ.

ಈ ಪ್ರಯೋಗಾಲಯದ ವರದಿಯ ಆಧಾರದಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಸುರಕ್ಷತೆಯಿಲ್ಲದ ಹಾಗೂ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಆಹಾರಕ್ಕೆ ಸಂಬಂಧಿಸಿದ ಉಲ್ಲಂಘನೆಗಳು ನಡೆದಿರುವುದಾಗಿ ಪ್ರಾಧಿಕಾರ ತಿಳಿಸಿದೆ.

ಉತ್ಪನ್ನದ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ದೊಡ್ಲ ಡೈರಿ ಸೇರಿದಂತೆ ಇತರ ಸಂಬಂಧಿತ ಆಹಾರ ಉದ್ಯಮ ಸಂಸ್ಥೆಗಳ ವಿರುದ್ಧವೂ ವಿಚಾರಣೆ ಹಾಗೂ ಕಾನೂನು ಕ್ರಮ ಮುಂದುವರಿಸಲು ಅನುಮತಿ ನೀಡಲಾಗಿದೆ.

Related posts

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಬೇಟೆ: ಕ್ರಿಕೆಟ್, ಹಾಕಿ, ಕುಸ್ತಿಯಲ್ಲಿ ಭರ್ಜರಿ ಸಾಧನೆ

JanaNota Editor

ನೇಪಾಳದಲ್ಲಿ ಭೀಕರ ಪ್ರವಾಹ : ಮೃತರ ಸಂಖ್ಯೆ 626ಕ್ಕೆ ಏರಿಕೆ, 2,000 ಜನ ನಾಪತ್ತೆ

JanaNota Editor

ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸ್ ದಾಳಿ ಎಂದು ಭಾವಿಸಿ ಓಡಿದಾಗ ಬಾವಿಗೆ ಬಿದ್ದು ಮೂವರು ಸಾವು

JanaNota Editor