ಜನ ನೋಟ
Headlines

ಮೊದಲ ದಿನವೇ ಅಬ್ಬರಿಸಿ, ಬೊಬ್ಬಿರಿದ ʻಜೈಲರ್‌ 2ʼ : ವಿಶ್ವಾದ್ಯಂತ 125+ ಕೋಟಿ ಕಲೆಕ್ಷನ್‌

ʻಸೂಪರ್‌ಸ್ಟಾರ್ʼ ರಜನಿಕಾಂತ್ ಅಭಿನಯದ, ನೆಲ್ಸನ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾವು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಮೊದಲ ದಿನವೇ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿದ್ದು, ಬರೋಬ್ಬರಿ 125.25 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ.

ಈ ಮೂಲಕ ಕಾಲಿವುಡ್ ಇತಿಹಾಸದಲ್ಲೇ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಅತಿದೊಡ್ಡ ತಮಿಳು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಆಗಿ ರಜನಿಕಾಂತ್ ಮತ್ತೊಮ್ಮೆ ತೆರೆಮೇಲೆ ಅಬ್ಬರಿಸಿದ್ದು, ಅಭಿಮಾನಿಗಳನ್ನು ಸಖತ್‌ ಆಗಿಯೇ ರಂಜಿಸಿದ್ದಾರೆ.

ʻಜೈಲರ್‌ 2ʼ ಚಿತ್ರಕ್ಕೆ ಮೂರನೇ ಸ್ಥಾನ

ಮೂಲಗಳ ಪ್ರಕಾರ, ಈ ಚಿತ್ರವು ಭಾರತದ ಮಾರುಕಟ್ಟೆಯಲ್ಲಿ ಮೊದಲ ದಿನ 70.25 ಕೋಟಿ ರೂ. ಗ್ರಾಸ್‌ ಗಳಿಕೆ ಕಂಡಿದೆ. ಇದರ ಜೊತೆಗೆ ವಿದೇಶದಿಂದ ಮೊದಲ ದಿನವೇ 55 ಕೋಟಿ ಹರಿದುಬಂದಿದ್ದು, ಒಟ್ಟಾರೆ ಕಲೆಕ್ಷನ್ 125.25 ಕೋಟಿ ಮುಟ್ಟಿದೆ.

ಆದರೆ, ಈ ಹಿಂದೆ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬಂದಿದ್ದ ರಜನಿಕಾಂತ್ ಅವರ ‘ಕೂಲಿ’ (151.10 ಕೋಟಿ ರೂ.) ಹಾಗೂ ʻದಳಪತಿʼ ವಿಜಯ್ ಅವರ ‘ಲಿಯೋ’ (142 ಕೋಟಿ ರೂ.) ಚಿತ್ರಗಳ ಮೊದಲ ದಿನದ ಜಾಗತಿಕ ದಾಖಲೆಯನ್ನು ಮುರಿಯಲು ‘ಜೈಲರ್ 2’ ಚಿತ್ರಕ್ಕೆ ಸಾಧ್ಯವಾಗಿಲ್ಲ.

ತಮಿಳು ವರ್ಷನ್‌ಗೆ ಜಾಸ್ತಿ ಕಲೆಕ್ಷನ್

ಈ ಚಿತ್ರವನ್ನು ಮೊದಲ ದಿನವೇ ದೇಶಾದ್ಯಂತ ಬರೋಬ್ಬರಿ 37 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಭಾರತದಲ್ಲಿ ತಮಿಳು ಆವೃತ್ತಿಯಿಂದಲೇ 43.35 ಕೋಟಿ ರೂ. ನೆಟ್ ಕಲೆಕ್ಷನ್ ಬಂದಿದೆ. ತೆಲುಗು ಆವೃತ್ತಿಯು 12.50 ಕೋಟಿ ತಂದುಕೊಟ್ಟರೆ, ಹಿಂದಿ ಆವೃತ್ತಿಯಿಂದ 3.50 ಕೋಟಿ ಹಾಗೂ ಕನ್ನಡ ಆವೃತ್ತಿಯಿಂದ 35 ಲಕ್ಷ ಗಳಿಕೆ ಸಂಗ್ರಹವಾಗಿದೆ.

ಕರ್ನಾಟಕದಲ್ಲಿ 14.50 ಕೋಟಿ ರೂ. ಕಲೆಕ್ಷನ್‌

ಇನ್ನು ರಾಜ್ಯವಾರು ಗ್ರಾಸ್ ಗಳಿಕೆಯನ್ನು ಗಮನಿಸಿದರೆ, ತಮಿಳುನಾಡು ನಂತರ ಕರ್ನಾಟಕದಲ್ಲೇ ಈ ಚಿತ್ರಕ್ಕೆ ದೊಡ್ಡಮಟ್ಟದ ಓಪನಿಂಗ್ ಸಿಕ್ಕಿದೆ. ತಮಿಳುನಾಡಿನಲ್ಲಿ 24 ಕೋಟಿ ಗ್ರಾಸ್ ಕಲೆಕ್ಷನ್ ಆಗಿದ್ದರೆ, ಕರ್ನಾಟಕದಲ್ಲಿ ಬರೋಬ್ಬರಿ 14.50 ಕೋಟಿ ಬಾಚಿಕೊಂಡಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಂದಲೂ ಒಟ್ಟಾಗಿ 14.50 ಕೋಟಿ ಗ್ರಾಸ್ ಬಂದಿದ್ದು, ಕೇರಳದಿಂದ 12.50 ಕೋಟಿ ಹಾಗೂ ಭಾರತದ ಉಳಿದ ಭಾಗಗಳಿಂದ 4.75 ಕೋಟಿ ಸಂಗ್ರಹವಾಗಿದೆ.

Related posts

ಹೊರ್ಮುಜ್ ಜಲಸಂಧಿಯಲ್ಲಿ ಯುಎಇಗೆ ಸೇರಿದ ಹಡಗಿನ ಮೇಲೆ ಇರಾನ್ ದಾಳಿ

JanaNota Editor

ಫ್ಲೈದುಬೈ ಸಹ ಪೈಲಟ್‌ ಅಲ್‌-ಹಮ್ಮಾಮಿ ಯಾರು? ವಿಮಾನ ಹೈಜಾಕ್‌ ಯತ್ನದ ಹಿಂದಿನ ಉದ್ದೇಶವೇನು?

JanaNota Editor

ನೇಪಾಳದಲ್ಲಿ ಭೀಕರ ಪ್ರವಾಹ : ಮೃತರ ಸಂಖ್ಯೆ 626ಕ್ಕೆ ಏರಿಕೆ, 2,000 ಜನ ನಾಪತ್ತೆ

JanaNota Editor