ಜನ ನೋಟ
Headlines

ಶಿವಮೊಗ್ಗ ದಸರಾ ಆನೆ ಘಟನೆ: ವೈಜ್ಞಾನಿಕ ವರದಿ ಬಳಿಕ ಮುಂದಿನ ಕ್ರಮ: ಸಚಿವ ಮಧು ಬಂಗಾರಪ್ಪ

ಬೆಂಗಳೂರು : ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಎಂಬ ಆನೆ ಗಾಬರಿಯಾಗಿ ಓಡಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಜಿಲ್ಲಾಧಿಕಾರಿ, ಅರಣ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬೆಂಗಳೂರಿನ ಗೃಹ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆನೆ ಗಾಬರಿಯಾಗಿ ಓಡಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಒಂದು ಕಡೆ ಬ್ಯಾಂಡ್ ವಾದ್ಯಗಳ ಶಬ್ದ, ಮತ್ತೊಂದೆಡೆ ಕಿಕ್ಕಿರಿದು ಸೇರಿದ್ದ ಜನರನ್ನು ಕಂಡು ಆನೆ ಬೆದರಿ ಓಡಿರಬಹುದು. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಸಹಜವಾಗಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಕಳೆದ ವರ್ಷ ಶಿವಮೊಗ್ಗ ದಸರಾ ಅತ್ಯಂತ ಸಡಗರದಿಂದ ನಡೆದಿತ್ತು. ಈ ಬಾರಿ ಆನೆಯನ್ನು ಬದಲಾಯಿಸಲು ಕಾರಣವೇನು ಎಂಬ ಪ್ರಶ್ನೆಯೂ ಎದುರಾಗಿದೆ. ಸೋಮಣ್ಣ ಆನೆ ಆರೋಗ್ಯವಾಗಿತ್ತು ಎಂಬ ಮಾಹಿತಿ ಇದೆ. ಆದರೂ ಘಟನೆಗೆ ನಿಖರವಾದ ಕಾರಣವೇನು ಎಂಬುದನ್ನು ವೈಜ್ಞಾನಿಕ ವರದಿಯಿಂದ ತಿಳಿದುಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.

ಅಧಿಕಾರಿಗಳ ಲೋಪದಿಂದ ಘಟನೆ ಸಂಭವಿಸಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ತಕ್ಷಣವೇ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಹೇಳುವುದು ಸರಿಯಲ್ಲ. ಮೊದಲು ವೈಜ್ಞಾನಿಕ ವರದಿ ಬರಲಿ. ಅದರ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ಮಾತನಾಡುತ್ತೇನೆ ಎಂದರು.

Related posts

ಹನೂರು ಶೂಟೌಟ್ ಗೆ ಹೊಸ ತಿರುವು: ಅರಣ್ಯಾಧಿಕಾರಿಗಳೇ ಮೊದಲು ಗುಂಡು ಹಾರಿಸಿದ್ದು : ಪರಾರಿಯಾಗಿದ್ದ ನಾಲ್ಕನೇ ವ್ಯಕ್ತಿ ಹೇಳಿಕೆ

JanaNota Editor

ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ : ಕಾಮುಕ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

JanaNota Editor

ಬ್ಲೂ ಡ್ರಮ್‌ಗೆ ಹಾಕಿದ್ದ ಮುಸ್ಕಾನ್ ಹಾಗೂ ಆಕೆ ಪ್ರಿಯಕರನಿಗೆ ಗಲ್ಲು ಶಿಕ್ಷೆ ಪ್ರಕಟ

JanaNota Editor