ಮಂಗಳೂರು : ತಾಲ್ಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಹೃದಯವ ವಿದ್ರಾವಕ ಘಟನೆಯೊಂದು ನಡೆದಿದ್ದು, ಮನೆಯ ಹೊರಗೆ ಬಟ್ಟೆ ಒಣಗಿಸಲು ಹೋದ ವೇಳೆ ವಿದ್ಯುತ್ ಪ್ರವಹಿಸಿ ತಾಯಿ ಮರ್ಸಿ ಮಸ್ಕರೇನಸ್ (45) ಹಾಗೂ ಮಗ ಶೋನ್ ಮಸ್ಕರೇನಸ್ (18) ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಮೂಡುಬಿದಿರೆಯ ಹೋಲಿ ರೋಸರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಶೋನ್, ಸ್ನಾನ ಮುಗಿಸಿ ಬಟ್ಟೆ ಒಣಗಿಸಲು ಹೋದಾಗ ಕಬ್ಬಿಣದ ಪಕ್ಕಾಸಿಗೆ ಸಂಪರ್ಕಗೊಂಡಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿದೆ.
ಮಗ ಕೂಗಾಡುತ್ತಿದ್ದ ವೇಳೆಯಲ್ಲಿ ಆತನನ್ನು ರಕ್ಷಿಸಲು ಧಾವಿಸಿದ ತಾಯಿ ಮರ್ಸಿ ಅವರಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ತೋಟದ ಕೆಲಸಕ್ಕೆ ಬಂದ ಕಾರ್ಮಿಕರು ಈ ದುರ್ಘಟನೆ ಯನ್ನು ಗುರುತಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಈ ಕುಟುಂಬವು ಈಗಾಗಲೇ 15 ವರ್ಷಗಳ ಹಿಂದೆ ಯಜಮಾನ ಸೈಮನ್ ಮಸ್ಕರೇನಸ್ ಅವರನ್ನು ಕಳೆದುಕೊಂಡಿದ್ದು, ಪ್ರಸ್ತುತ ತಾಯಿ-ಮಗ ಮಾತ್ರ ವಾಸಿಸುತ್ತಿದ್ದರು. ವಿದೇಶದಲ್ಲಿರುವ ಸೈಮನ್ ಅವರ ಸಹೋದರ ಜೆರಿ ಮಸ್ಕರೇನಸ್ ಊರಿಗೆ ಮರಳಿದ ಬಳಿಕ ಮೃತದೇಹಗಳ ಅಂತ್ಯಕ್ರಿಯೆ ನೆರವೇರಲಿದೆ.
