ಬೆಂಗಳೂರು : ಕುಮಾರಸ್ವಾಮಿ ಅವರಿಗೆ ಈಗಾಗಲೇ ಮೂರನೇ ಸಲ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ನಾಲ್ಕನೇ ಸಲ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿರುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಜನರ ಹಿತಕ್ಕಾಗಿ ದುಡಿಯುತ್ತಿರುವ ನನಗೆ ಅವರ ಇಚ್ಛೆಯಂತೆ ನಾಲ್ಕನೇ ಬಾರಿಗೆ ಹೃದಯಾಘಾತ ಆಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಅವರು ನನ್ನ ಸಾವು ಬಯಸುತ್ತಿದ್ದಾರೆ. ಆದರೆ, ನಾನು ಜನರ ಹಿತದ ದೃಷ್ಟಿಯಿಂದ ಹೋರಾಟ ನಡೆಸುತ್ತಿದ್ದೇನೆ.
ನನಗೆ ನಾಲ್ಕನೇ ಬಾರಿ ಹೃದಯಾಘಾತ ಆಗಿಬಿಡಲಿ, ಓಪನ್ ಹಾರ್ಟ್ ಸರ್ಜರಿ ಆಗಲಿ ಎನ್ನುವುದು ಗೃಹ ಸಚಿವರ ಬಯಕೆಯಾಗಿದೆ. ಆದರೆ ಆ ಮಟ್ಟಕ್ಕೆ ನನ್ನನ್ನು ತೆಗೆದುಕೊಂಡು ಹೋಗಲು ಅವರು ತೀರ್ಮಾನ ಮಾಡಿದ್ದರೂ ನನ್ನನ್ನು ಕಾಪಾಡಲು ಭಗವಂತನಿದ್ದಾನೆ ಎಂದರು.
ಸಂಶಯ ಬಂದರೆ ಕುಮಾರಸ್ವಾಮಿ ಅವರನ್ನೂ ತನಿಖೆ ಮಾಡುತ್ತೇವೆ ಎಂಬ ಗೃಹ ಸಚಿವರ ಹೇಳಿಕೆಗೆ ತೀವ್ರವಾಗಿ ಕೆರಳಿದ ಎಚ್ಡಿಕೆ, ಅವರ ಉದ್ಧಟತನ, ಆ ಅಧಿಕಾರದ ಮದ ಇದೆಯಲ್ಲ, ಆ ಮದವನ್ನು ಇಳಿಸುವುದು ಹೇಗೆ ಎಂದು ನಮಗೆ ಗೊತ್ತಿದೆ. ಅದನ್ನು ಇಳಿಸೋಣಂತೆ ಎಂದು ನೇರ ಸವಾಲು ಹಾಕಿದರು.
