ಜನ ನೋಟ
ಶಿವಮೊಗ್ಗ

ಅಂಕಗಳಿಕೆಯಷ್ಟೇ ಅಲ್ಲ, ಕೌಶಲ್ಯ ಜ್ಞಾನವೂ ಅಗತ್ಯ: ಸಿ.ಎಸ್.ಷಡಾಕ್ಷರಿ

ಶಿವಮೊಗ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಕೆಯೊಂದಿಗೆ ಕೌಶಲ್ಯ ಜ್ಞಾನವೂ ಅಗತ್ಯವಾಗಿದೆ. ಕೌಶಲ್ಯವನ್ನು ಕರಗತ ಮಾಡಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಶ್ರೀ ರಾಮ್ ಫೈನಾನ್ಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಅಂಕಗಳಿಕೆಯೊಂದೇ ಇಂದಿನ ಕಾಲಮಾನದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆಯುವ ಮಾನದಂಡವಲ್ಲ. ಶಿಕ್ಷಣದ ಜತೆಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು.

ಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಅದರಲ್ಲಿರುವ ಉತ್ತಮ ಅಂಶಗಳನ್ನು ಮಾತ್ರ ಬಳಸಿಕೊಳ್ಳಬೇಕು. ಮೊಬೈಲ್ ದುರ್ಬಳಕೆ, ದುಶ್ಚಟಗಳು ಹಾಗೂ ದುರಭ್ಯಾಸಗಳಿಗೆ ಬಲಿಯಾದರೆ ಭವಿಷ್ಯ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಪೋಷಕರು ತಮ್ಮ ಮಕ್ಕಳು ತಾವು ಅನುಭವಿಸಿದ ಕಷ್ಟಗಳನ್ನು ಅನುಭವಿಸಬಾರದು ಎಂಬ ಉದ್ದೇಶದಿಂದ ಶಿಕ್ಷಣ ಕೊಡಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಂದೆ-ತಾಯಿಗೆ ಕೀರ್ತಿ ತರಬೇಕು. ಸಮಾಜದ ಆಸ್ತಿಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ಶ್ರೀ ರಾಮ್ ಫೈನಾನ್ಸ್ ಸಂಸ್ಥೆಯು ತನ್ನ ಗ್ರಾಹಕರ ಮಕ್ಕಳಿಗೆ 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯು ಶೇ.60ರಷ್ಟು ಅಂಕ ಗಳಿಸಿದ ಮಕ್ಕಳಿಗೂ ಪ್ರೋತ್ಸಾಹ ನೀಡುತ್ತಿರುವುದು ಇತರರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್‌ಟಿಒ ಅಧೀಕ್ಷಕ ಶಶೀಧರ್, ಶರಶ್ಚಂದ್ರ, ಮುರುಳೀಧರ್ ರೆಡ್ಡಿ, ಸಂಸ್ಥೆಯ ರೀಜನಲ್ ಮ್ಯಾನೇಜರ್ ಜಾರ್ಜ್ ಡಿಸೋಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಕಸ್ತೂರಿರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಪಾದಯಾತ್ರೆ

JanaNota Editor

ಸಚಿವರ ಹನಿಟ್ರ್ಯಾಪ್‌ ಚರ್ಚೆ ಸಚಿವ ಸಂಪುಟದ ಘನತೆಗೆ ಧಕ್ಕೆ: ಈಶ್ವರಪ್ಪ

JanaNota Editor

ರಾಷ್ಟ್ರಭಕ್ತರ ಬಳಗದ ಚಟುವಟಿಕೆಗೆ ಶಾಸಕ ಚನ್ನಬಸಪ್ಪ ಅಸಮಾಧಾನ

JanaNota Editor