ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ತೀವ್ರಗೊಳಿಸಿದ್ದು, ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಅವರ ಮನೆಯಲ್ಲಿ ನಡೆಸಿದ ಪರಿಶೀಲನೆ ವೇಳೆ ಮಹತ್ವದ ಡೈರಿಯೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಆರೋಪಿಯ ಮನೆಯಲ್ಲಿ ಸಿಕ್ಕಿರುವ ಡೈರಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳ ಹೆಸರುಗಳು, ಅವರಿಂದ ಪಡೆಯಲಾಗಿದ್ದ ಹಾಗೂ ಬಾಕಿ ಉಳಿದಿದ್ದ ಹಣದ ವಿವರಗಳನ್ನು ದಾಖಲಿಸಲಾಗಿದೆ ಎನ್ನಲಾಗಿದೆ. ಯಾರು ಎಷ್ಟು ಹಣ ನೀಡಿದ್ದಾರೆ, ಯಾರಿಂದ ಎಷ್ಟು ಹಣ ಬರಬೇಕಿದೆ ಎಂಬ ಮಾಹಿತಿಯನ್ನು ಆರೋಪಿ ಕನ್ನಡದಲ್ಲೇ ಬರೆದಿಟ್ಟಿದ್ದಾನೆ ಎಂದು ವರದಿಯಾಗಿದೆ.
ಡೈರಿಯಲ್ಲಿ ಕೆಲವು ಅಭ್ಯರ್ಥಿಗಳ ಬ್ಯಾಂಕ್ ಖಾತೆ ಸಂಖ್ಯೆಗಳ ವಿವರಗಳೂ ಇದ್ದು, ‘ಜಲ ಸಂಪನ್ಮೂಲ ಇಲಾಖೆ’ ಎಂಬ ಉಲ್ಲೇಖವೂ ಪತ್ತೆಯಾಗಿದೆ ಎನ್ನಲಾಗಿದೆ. ಈ ಮಾಹಿತಿಯನ್ನು ಆಧರಿಸಿ ಸಿಐಡಿ ಅಧಿಕಾರಿಗಳು ಅಕ್ರಮದ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ರಹಸ್ಯ ತರಬೇತಿ?
ಅಕ್ರಮವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮುಂದಾಗಿದ್ದ 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ರಹಸ್ಯವಾಗಿ ತರಬೇತಿ ನೀಡಲು ಬಸವರಾಜ್ ಕನ್ನಾಳೆ ಮೂರು ಐಷಾರಾಮಿ ವಿಲ್ಲಾಗಳನ್ನು ಬುಕ್ ಮಾಡಿದ್ದ ಎನ್ನುವ ಮಾಹಿತಿಯೂ ತನಿಖೆಯಲ್ಲಿ ಹೊರಬಿದ್ದಿದೆ.
ವಿಲ್ಲಾಗಳಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಿ, ಮುಂಗಡವಾಗಿ ಲಕ್ಷಾಂತರ ರೂಪಾಯಿ ಪಡೆದು, ಉಳಿದ ಹಣವನ್ನು ನಂತರ ಪಾವತಿಸುವಂತೆ ಸಮಯ ನಿಗದಿಪಡಿಸಲಾಗಿತ್ತು ಎನ್ನಲಾಗಿದೆ. ಡೈರಿಯಲ್ಲಿ ದಾಖಲಾಗಿರುವ ಹಣದ ವಿವರಗಳು ಈ ಅಂಶಗಳ ಕುರಿತು ತನಿಖಾಧಿಕಾರಿಗಳ ಗಮನ ಸೆಳೆದಿವೆ.
ಡೈರಿಯಲ್ಲಿ ಅಭ್ಯರ್ಥಿಗಳ ಹೆಸರು, ಲಕ್ಷಾಂತರ ರೂ. ಬಾಕಿ
ಡೈರಿಯಲ್ಲಿ ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಮೋಹನ್ ಕುಮಾರ್, ಸಂಗಮೇಶ, ಪದ್ಮಾವತಿ, ಹರೀಶ ಸೇರಿದಂತೆ ಹಲವು ಹೆಸರುಗಳ ಮುಂದೆ ಹಣದ ವಿವರಗಳನ್ನು ದಾಖಲಿಸಲಾಗಿದೆ ಎನ್ನಲಾಗಿದೆ.
ಕೆಲವರ ಹೆಸರಿನ ಮುಂದೆ ₹10 ಲಕ್ಷ, ಕೆಲವರ ಹೆಸರಿನ ಮುಂದೆ ₹5 ಲಕ್ಷ ಸೇರಿದಂತೆ ವಿವಿಧ ಮೊತ್ತಗಳನ್ನು ‘ಬಾಕಿ’ ಮತ್ತು ‘ಬರಬೇಕು’ ಎಂದು ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.
ಸಿಐಡಿ ಅಧಿಕಾರಿಗಳು ಡೈರಿಯನ್ನು ವಶಕ್ಕೆ ಪಡೆದು, ಅದರಲ್ಲಿರುವ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಡೈರಿಯಲ್ಲಿ ಉಲ್ಲೇಖವಾಗಿರುವ ಅಭ್ಯರ್ಥಿಗಳು ಹಾಗೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಡೈರಿಯಲ್ಲಿರುವ ದಾಖಲೆಗಳ ಆಧಾರದ ಮೇಲೆ KPSC ನೇಮಕಾತಿ ಅಕ್ರಮದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
