ಜನ ನೋಟ
ಶಿವಮೊಗ್ಗ

ಅನ್ನದಾತರ ಸಂಭ್ರಮಕ್ಕೆ ಸಾಕ್ಷಿಯಾದ ರೈತ ದಸರಾ ಜಾಥಾ

ಕೃಷಿ ವಸ್ತು ಪ್ರದರ್ಶನಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ

ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ಹೆಗ್ಗುರುತಾಗಿರುವ ಶಿವಮೊಗ್ಗ ನಾಡಹಬ್ಬ ದಸರಾ-2026ರ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ರೈತ ದಸರಾ ಜಾಥಾ ಹಾಗೂ ರೈತ ದಸರಾ ಕೃಷಿ ವಸ್ತು ಪ್ರದರ್ಶನಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ ನೀಡಿದರು.

ನಗರದಲ್ಲಿ ನಡೆದ ರೈತ ದಸರಾ ಜಾಥಾದಲ್ಲಿ ಸ್ವತಃ ಶಾಸಕರು ಪಾಲ್ಗೊಂಡು ನೂರಾರು ರೈತರೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಜಾಥಾದಲ್ಲಿ ರೈತರ ಸಾಂಸ್ಕೃತಿಕ ವೈಭವ, ಕೃಷಿ ಪರಂಪರೆ ಹಾಗೂ ಮಲೆನಾಡಿನ ಕೃಷಿ ಬದುಕಿನ ವೈಶಿಷ್ಟ್ಯಗಳು ಗಮನ ಸೆಳೆದವು.

ನಂತರ ಕೃಷಿ ಪರಿಕರಗಳು, ಆಧುನಿಕ ಕೃಷಿ ತಂತ್ರಜ್ಞಾನ, ಸಾವಯವ ಕೃಷಿ ಪದ್ಧತಿ ಸೇರಿದಂತೆ ರೈತರಿಗೆ ಉಪಯುಕ್ತವಾದ ವಿವಿಧ ಮಾಹಿತಿಗಳನ್ನು ಒಳಗೊಂಡ ರೈತ ದಸರಾ ಕೃಷಿ ವಸ್ತು ಪ್ರದರ್ಶನಕ್ಕೆ ಶಾಸಕರು ಚಾಲನೆ ನೀಡಿ, ವಿವಿಧ ಮಳಿಗೆಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ನಾಡಹಬ್ಬ ದಸರಾ ಮಹೋತ್ಸವದಲ್ಲಿ ರೈತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸುವುದು ಹಾಗೂ ರೈತರಿಗೆ ಆಧುನಿಕ ತಂತ್ರಜ್ಞಾನಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಇಂತಹ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ಮಲೆನಾಡಿನ ಅನ್ನದಾತರ ಹಿತರಕ್ಷಣೆ ಹಾಗೂ ಕೃಷಿ ಕ್ಷೇತ್ರದ ಪ್ರಗತಿಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸದಾ ಬದ್ಧವಾಗಿದ್ದು, ರೈತರಿಗೆ ಅಗತ್ಯ ಸೌಲಭ್ಯ ಹಾಗೂ ತಂತ್ರಜ್ಞಾನ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು ಹಾಗೂ ಅಪಾರ ಸಂಖ್ಯೆಯ ರೈತರು ಭಾಗವಹಿಸಿದ್ದರು.

Related posts

ಶಿಕಾರಿಪುರದ ಹರಿಗೆ ಗ್ರಾಮದಲ್ಲಿ ಭೀಗರ ಊಟಕ್ಕೆ ನಿಷೇಧ; ನಿಯಮ ಮೀರಿದ್ರೆ 1 ಲಕ್ಷ ದಂಡ

JanaNota Editor

ತೀರ್ಥಹಳ್ಳಿ ಮತದಾರರ ಪಟ್ಟಿ ವಿಚಾರ : ಬಿಜೆಪಿ ಮುಖಂಡರ ದೂರಿಗೆ ಕಾಂಗ್ರೆಸ್ ಆಕ್ಷೇಪ

JanaNota Editor

ವೀರ ಸಾವರ್ಕರ್ ಹಿಂದೂ ಸಂಘಟನಾ ಮಹಾಮಂಡಳಿ; ಸೆ. 14ರಿಂದ 82ನೇ ಗಣೇಶೋತ್ಸವ

JanaNota Editor