ಜನ ನೋಟ
ಶಿವಮೊಗ್ಗ

ಬಡ ವಿದ್ಯಾರ್ಥಿಗಳಿಗೆ ₹10 ಕೋಟಿ ವಿದ್ಯಾರ್ಥಿವೇತನ ಕೊಡಿಸಿದ ಶಿಕ್ಷಕನಿಗೆ ರಾಷ್ಟ್ರೀಯ ಪ್ರಶಸ್ತಿ

ಅ.21ರಂದು ಕೆ. ನಾರಾಯಣ ನಾಯಕ್‌ಗೆ ‘ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ಶಿವಮೊಗ್ಗ: ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ₹10 ಕೋಟಿಗೂ ಅಧಿಕ ಮೊತ್ತದ ವಿದ್ಯಾರ್ಥಿವೇತನ ದೊರಕಿಸಲು ನೆರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರ್ಪೆ ಗ್ರಾಮದ ನಿವೃತ್ತ ಶಿಕ್ಷಕ ಕೆ. ನಾರಾಯಣ ನಾಯಕ್ ಅವರಿಗೆ 2026ನೇ ಸಾಲಿನ ‘ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕ ಎಂ.ಎನ್. ಸುಂದರ ರಾಜ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.21ರಂದು ಗೆಜ್ಜೇನಹಳ್ಳಿ ಮಾರ್ಗಮಧ್ಯದ ಕೆಎಚ್‌ಬಿ ಪ್ರೆಸ್ ಕಾಲೊನಿಯಲ್ಲಿ ನಡೆಯುವ ವಿಜಯದಶಮಿ ಕಾರ್ಯಕ್ರಮದಲ್ಲಿ ₹1 ಲಕ್ಷ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಕೆ. ನಾರಾಯಣ ನಾಯಕ್ ಅವರು 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತರಾಗಿದ್ದಾರೆ. ಆದರೆ ನಿವೃತ್ತಿಯ ನಂತರವೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಶಾಲಾ-ಕಾಲೇಜುಗಳಿಗೆ ತೆರಳಿ ವಿವಿಧ ವಿದ್ಯಾರ್ಥಿವೇತನಗಳ ಕುರಿತು ಮಾಹಿತಿ ನೀಡುವ ಮೂಲಕ ಅರ್ಹ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ ಎಂದು ಹೇಳಿದರು.

ಸೇವಾವಧಿಯಲ್ಲೇ ತಮ್ಮ ವೇತನದ ಒಂದು ಭಾಗವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದ ಅವರು, ನಿವೃತ್ತಿಯ ಬಳಿಕವೂ ಪಿಂಚಣಿಯ ಶೇ.50ರಷ್ಟನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಸನ್ಮಾನದ ರೂಪದಲ್ಲಿ ನೀಡುವ ಹಣವನ್ನೂ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ಇದುವರೆಗೆ ಸುಮಾರು 200 ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ನೆರವಾಗಿದ್ದಾರೆ ಎಂದು ತಿಳಿಸಿದರು.

ಪ್ರೇಮಾ ಮಂಜುನಾಥ್‌ಗೆ ‘ಲಲಿತಾ ಪುರಸ್ಕಾರ’

ಹರಿಹರಪುರದ ಪ್ರೇಮಾ ಮಂಜುನಾಥ್ ಅವರಿಗೆ 2026ನೇ ಸಾಲಿನ ‘ಶ್ರೀ ಲಲಿತಾ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಕಳೆದ 25 ವರ್ಷಗಳಿಂದ ಶ್ರೀ ಶಂಕರ ಭಜನಾ ಮಂಡಳಿ ಮೂಲಕ ಮಹಿಳೆಯರಿಗೆ ಶಿವಾನಂದ ಲಹರಿ, ಸೌಂದರ್ಯ ಲಹರಿ, ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮ ಸೇರಿದಂತೆ ವಿವಿಧ ಸ್ತೋತ್ರಗಳನ್ನು ಕಲಿಸುತ್ತಿದ್ದಾರೆ.

ಪ್ರತಿವರ್ಷ ಸೌಂದರ್ಯ ಲಹರಿ ಸಪ್ತಾಹ ಆಯೋಜಿಸುವ ಅವರು, ಪ್ರತಿ ಏಕಾದಶಿಯಂದು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಭಗವದ್ಗೀತೆ ಪಾರಾಯಣ ನಡೆಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ₹10 ಸಾವಿರ ನಗದು ಬಹುಮಾನದೊಂದಿಗೆ ಪುರಸ್ಕಾರ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ರಮಣ ಮಹರ್ಷಿ ಆಶ್ರಮದ ಸಂಸ್ಥಾಪಕ ಶ್ರೀನಿವಾಸ ರೆಡ್ಡಿ, ಹಿರಿಯ ನ್ಯಾಯವಾದಿ ಏಕಲವ್ಯ, ಬಸ್ ಮಾಲೀಕ ಹಾಗೂ ಸಮಾಜ ಸೇವಕ ಧರಣಿ ಕುಮಾರ್ ಮತ್ತು ಪತ್ರಕರ್ತ ಗಜೇಂದ್ರ ಕುಡಾಲ್ಕರ್ ಅವರನ್ನು ಗೌರವಿಸಲಾಗುವುದು.

ಅ.21ರಂದು ಕೆಎಚ್‌ಬಿ ಕಾಲೊನಿ, ಗೆಜ್ಜೇನಹಳ್ಳಿಯ ಪ್ರೆಸ್ ಕಾಲೊನಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಂಡಿಕಾ ಹೋಮ, ಸಾಮೂಹಿಕ ದುರ್ಗಾಕವಚ ಪಠಣ, ‘ಮಹಾಶಕ್ತಿ’ ವಾರ್ಷಿಕ ಸಂಚಿಕೆ ಬಿಡುಗಡೆ, ದೊಡ್ಡಮ್ಮ ದೇವಿಯ ಉತ್ಸವ ಮೆರವಣಿಗೆ, ತೊಟ್ಟಿಲು ಶಾಸ್ತ್ರ, ಭಜನೆ ಹಾಗೂ ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ದೇವಿ ಉಪಾಸಕ ಸಿದ್ದಪ್ಪಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಎಂ.ಎನ್. ಸುಂದರ ರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನರಸಿಂಹ ಕೆ., ಮಧುಸೂಧನ್ ಬಿ., ಅರ್ಪಿತ್ ಕುಮಾರ್, ಷಣ್ಮುಖ, ಗಜೇಂದ್ರ ಕುಡಾಲ್ಕರ್, ಸಚಿನ್ ಎನ್.ಪಿ. ಮತ್ತು ವಿಜಯ ಉಪಸ್ಥಿತರಿದ್ದರು.

Related posts

ಬ್ಯಾಂಕ್ ಮುಷ್ಕರದ ನಡುವೆ ಗ್ರಾಹಕರಿಗೆ ಬಿಗ್ ರಿಲೀಫ್; ಎಟಿಎಂ ವಹಿವಾಟು ಶುಲ್ಕ ಸಂಪೂರ್ಣ ರದ್ದು, ಎಷ್ಟು ಬಾರಿಯಾದರೂ ಉಚಿತವಾಗಿ ಹಣ ಡ್ರಾ ಮಾಡಿ

JanaNota Editor

ಶಿವಮೊಗ್ಗದ ಇಎಸ್ಐ ಆಸ್ಪತ್ರೆಗಳಿಗೆ ಶಾಸಕ ಚನ್ನಬಸಪ್ಪ ದಿಢೀರ್ ಭೇಟಿ: ರೋಗಿಗಳನ್ನು ಹೊರಗಿನ ಮೆಡಿಕಲ್‌ಗೆ ಕಳುಹಿಸಿದರೆ ಕ್ರಮ

JanaNota Editor

ಆ.16ರಂದು ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

JanaNota Editor