ಜನ ನೋಟ
ಶಿವಮೊಗ್ಗ

ಶಿವಮೊಗ್ಗ ದಸರಾ: ಪುರಾತನ ನಾಣ್ಯಗಳ ಅಪರೂಪದ ಲೋಕ ಅನಾವರಣ

ಅ.17, 18ರಂದು ವೀರಶೈವ ಕಲ್ಯಾಣ ಮಂದಿರದಲ್ಲಿ ನಾಣ್ಯ, ನೋಟು, ಅಂಚೆಚೀಟಿಗಳ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ದಸರಾ-2026ರ ಅಂಗವಾಗಿ ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಾಹಕರ ಸಂಘ ಟ್ರಸ್ಟ್ ವತಿಯಿಂದ ಅ.17 ಮತ್ತು 18ರಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಪುರಾತನ ನಾಣ್ಯಗಳು, ನೋಟುಗಳು ಹಾಗೂ ಅಂಚೆಚೀಟಿಗಳ ಅಪರೂಪದ ಪ್ರದರ್ಶನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಕಾಂತ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.17ರಂದು ಬೆಳಿಗ್ಗೆ 10.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರದರ್ಶನ ಉದ್ಘಾಟಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್. ರುದ್ರೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ, ಸಂಘದ ಅಧ್ಯಕ್ಷ ದೇವದಾಸ ಎನ್. ನಾಯಕ್, ವೀರಶೈವ ಕಲ್ಯಾಣ ಮಂದಿರ ಸಮಿತಿ ಅಧ್ಯಕ್ಷ ಜೆ. ವಿರೂಪಾಕ್ಷಪ್ಪ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಕಾಂತ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಪ್ರದರ್ಶನದಲ್ಲಿ ಕರ್ನಾಟಕವನ್ನು ಆಳಿದ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಅಳುಪರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ಅರಸರ ಕಾಲದ ಅಪರೂಪದ ನಾಣ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಕಾಲದ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳೂ ಸಾರ್ವಜನಿಕರ ಗಮನ ಸೆಳೆಯಲಿವೆ ಎಂದರು.

ಶಾತವಾಹನರು, ಕ್ಷತ್ರಪರು, ಗುಪ್ತರು, ಕುಶಾನರು, ಇಂಡೋ-ಗ್ರೀಕರು, ಇಂಡೋ-ಪಾರ್ಥಿಯನ್ನರು ಮತ್ತು ರೋಮನ್ನರ ಕಾಲದ ನಾಣ್ಯಗಳ ಜೊತೆಗೆ ಪ್ರಾಚೀನ ಬೆಳ್ಳಿ ಅಹತ ಮುದ್ರೆಯ ನಾಣ್ಯಗಳು, ದೆಹಲಿ ಸುಲ್ತಾನರು, ಮೊಘಲರು, ಬಹಮನಿ ಹಾಗೂ ವಿಜಯಪುರ ಸುಲ್ತಾನರ ಕಾಲದ ನಾಣ್ಯಗಳನ್ನೂ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ಬ್ರಿಟಿಷರ ಆಳ್ವಿಕೆಯ ಕಾಲದ ನಾಣ್ಯಗಳಿಂದ ಹಿಡಿದು ಸ್ವತಂತ್ರ ಭಾರತದ ನಾಣ್ಯಗಳವರೆಗೆ ವಿವಿಧ ಕಾಲಘಟ್ಟದ ಸಂಗ್ರಹಗಳು ಪ್ರದರ್ಶನದಲ್ಲಿರಲಿವೆ. ದೇಶ-ವಿದೇಶಗಳ ನೋಟುಗಳು, ಭಾರತೀಯ ಹಾಗೂ ರಾಜಪ್ರಭುತ್ವದ ಕಾಲದ ಅಂಚೆಚೀಟಿಗಳು ಮತ್ತು 70ಕ್ಕೂ ಹೆಚ್ಚು ದೇಶಗಳ ಪಾಲಿಮರ್ ನೋಟುಗಳೂ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ ಎಂದರು.

ಮೂಡಬಿದಿರೆಯ ನಾಣ್ಯ ಸಂಗ್ರಾಹಕ ನಿತ್ಯಾನಂದ ಪೈ ಸೇರಿದಂತೆ ವಿನೋದ್ ಕುಮಾರ್ ಜೈನ್, ಎಸ್. ಚಂದ್ರಕಾಂತ್, ಎಲ್. ಸುಬ್ರಹ್ಮಣ್ಯ, ಸುರೇಶ್ ಶೇಟ್, ಮಹಮದ್, ಎಸ್. ಸುನಿಲ್ ಕುಮಾರ್, ಮಹೇಂದ್ರ ಕುಮಾರ್ ಜೈನ್, ರಾಘವೇಂದ್ರ, ಸನ್ಮಾನ್ ನಾಗರಾಜ್, ನಾಗಾರ್ಜುನ, ಜಗದೀಶ್, ಮೇರಿ ಡಿಸೋಜಾ ಹಾಗೂ ಪ್ರಕಾಶ್ ಶೇಟ್ ಅವರ ಅಪರೂಪದ ಸಂಗ್ರಹಗಳು ಪ್ರದರ್ಶನದಲ್ಲಿ ಇರಲಿವೆ.

ಅ.17 ಮತ್ತು 18ರಂದು ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಿಸಲು ಅವಕಾಶವಿದ್ದು, ಪ್ರವೇಶ ಉಚಿತವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇತಿಹಾಸದ ಅಪರೂಪದ ನಾಣ್ಯಗಳನ್ನು ವೀಕ್ಷಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ಮರಣಾರ್ಥ ನಾಣ್ಯಗಳ ಚಲಾವಣೆಗೆ ಒತ್ತಾಯ

ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಸ್ಮರಣಾರ್ಥ ನಾಣ್ಯಗಳು ಸಾರ್ವಜನಿಕ ಚಲಾವಣೆಯಲ್ಲಿ ಸುಲಭವಾಗಿ ಲಭ್ಯವಾಗುತ್ತಿಲ್ಲ. ದೀನದಯಾಳ್ ಉಪಾಧ್ಯಾಯ ಅವರ ₹5ರ ನಾಣ್ಯಕ್ಕೆ ₹4,000 ಹಾಗೂ ತಾತ್ಯಾ ಟೋಪಿ ಅವರ ₹10ರ ನಾಣ್ಯಕ್ಕೆ ₹5,000 ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕವಿ ಮುದ್ರಣದ ನಾಣ್ಯಗಳೂ ಸುಲಭವಾಗಿ ದೊರೆಯುತ್ತಿಲ್ಲ. ಹೀಗಾಗಿ ನಾಣ್ಯ ಸಂಗ್ರಹಕಾರರಿಗೆ ಅನುಕೂಲವಾಗುವಂತೆ ಸ್ಮರಣಾರ್ಥ ನಾಣ್ಯಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ಬಿಡುಗಡೆ ಮಾಡಬೇಕು ಎಂದು ಎಸ್. ಚಂದ್ರಕಾಂತ್ ಒತ್ತಾಯಿಸಿದರು.

₹5ರ ಟ್ರ್ಯಾಕ್ಟರ್ ನೋಟಿಗೆ ₹20 ಲಕ್ಷ ಎಂಬುದು ಸುಳ್ಳು

ಟ್ರ್ಯಾಕ್ಟರ್ ಚಿತ್ರವಿರುವ ₹5ರ ಹಳೆಯ ನೋಟಿನ ಮುಖಬೆಲೆ ₹5 ಮಾತ್ರ. ನಾಣ್ಯ ಸಂಗ್ರಹಕಾರರ ನಡುವೆ ಅದರ ಮೌಲ್ಯ ಸಾಮಾನ್ಯವಾಗಿ ₹10ರಿಂದ ₹12ರವರೆಗೆ ಇರಬಹುದು. ಆದರೆ ₹20 ಲಕ್ಷ ನೀಡುವುದಾಗಿ ಹೇಳಿ ಕೆಲವರು ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರು ಇಂತಹ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್ ಮನವಿ ಮಾಡಿದರು.

Related posts

ತನು ಜ್ಯೂಸ್ ಸೆಂಟರ್ ಬಂದ್

JanaNota Editor

ಸಕ್ರೆಬೈಲ್‌ನಲ್ಲಿ ಶಾಲಾ ಬಸ್ ಅಪಘಾತ : ಮರಕ್ಕೆ ಡಿಕ್ಕಿ, ಚಾಲಕ–ಮಕ್ಕಳಿಗೆ ಸಣ್ಣಪುಟ್ಟ ಗಾಯ

JanaNota Editor

ಗುತ್ತಿ ಮಲ್ನಾಡ್ ಆಸ್ಪತ್ರೆಯಲ್ಲಿ ಆ. 6ರಂದು ಆರ್ಥೋಪೆಡಿಕ್ ಸಮಾಲೋಚನಾ ಶಿಬಿರ

JanaNota Editor