ಜನ ನೋಟ
ಶಿವಮೊಗ್ಗ

ಕಸ್ತೂರಿ ರಂಗನ್ ವರದಿ: ಜನವಸತಿ, ಕೃಷಿ ಭೂಮಿ ಹೊರಗಿಡಲು ಸರ್ಕಾರಕ್ಕೆ ಮನವಿ

ಜಿ. ಪಂ. ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ, ಸೆ.11: ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳಲ್ಲಿ ಅಗತ್ಯ ಮಾರ್ಪಾಡು ಮಾಡಿ, ಅರಣ್ಯ ಭೂಮಿಯೆಂದು ಗುರುತಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಜನವಸತಿ ಪ್ರದೇಶಗಳು, ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಕೃಷಿ ಭೂಮಿ ಹಾಗೂ ವನವಾಸಿಗಳು ವಾಸಿಸುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಯಿಂದ ಹೊರಗಿಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಸ್ಥಳೀಯ ಜನರ ಅಹವಾಲುಗಳನ್ನು ಆಲಿಸದೆ ಹಾಗೂ ಸ್ಥಳೀಯ ವಾಸ್ತವ ಸ್ಥಿತಿಗತಿಗಳನ್ನು ಪರಿಗಣಿಸದೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

447 ಗ್ರಾಮಗಳು ವರದಿಯ ವ್ಯಾಪ್ತಿಯಲ್ಲಿ

ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮಘಟ್ಟದ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ರಾಜ್ಯದ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ತಾಲೂಕಿನ 447 ಗ್ರಾಮಗಳು ವರದಿಯ ವ್ಯಾಪ್ತಿಯಲ್ಲಿವೆ ಎಂದು ತಿಳಿಸಿದರು.

ಮಲೆನಾಡಿನ ಬಹುತೇಕ ಕುಟುಂಬಗಳ ಆರ್ಥಿಕ ಜೀವನ ಅಡಕೆ, ಕಾಫಿ, ಮೆಣಸು, ತೆಂಗು, ಭತ್ತ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆಯ ಮೇಲೆ ಅವಲಂಬಿತವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಜಾರಿಯಾದರೆ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನು ಹಾಗೂ ಮನೆ-ಮಠ ಹೊಂದಿರುವ ಕುಟುಂಬಗಳ ಬದುಕಿನ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದರು.

“ಜನವಸತಿ ಹಾಗೂ ಕೃಷಿ ಪ್ರದೇಶಗಳನ್ನು ಸೂಕ್ಷ್ಮ ವಲಯದಿಂದ ಹೊರಗಿಡಬೇಕು. ಸ್ಥಳೀಯ ವಾಸ್ತವಿಕತೆಯನ್ನು ಆಧರಿಸಿ ವೈಜ್ಞಾನಿಕ ಮರುಸರ್ವೆ ನಡೆಸಬೇಕು ಎಂಬುದು ನಮ್ಮ ಆಶಯ” ಎಂದು ಬಿ.ವೈ. ರಾಘವೇಂದ್ರ ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಗೂ ಆತಂಕ

ಮಲೆನಾಡಿನ ಹಲವು ಗ್ರಾಮಗಳಿಗೆ ಇನ್ನೂ ಉತ್ತಮ ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಶಾಲೆ ಹಾಗೂ ಆರೋಗ್ಯ ಮೂಲಸೌಕರ್ಯದ ಅಗತ್ಯವಿದೆ. ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾದರೆ ಹೊಸ ರಸ್ತೆ, ಕಟ್ಟಡ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಪರಿಸರ ಅನುಮತಿಗಳ ಅಗತ್ಯ ಎದುರಾಗಬಹುದು ಎಂದು ಅವರು ಹೇಳಿದರು.

ಜಮೀನಿನ ಬಳಕೆ ಮತ್ತು ನಿರ್ಮಾಣದ ಮೇಲೆ ನಿರ್ಬಂಧ ಹೆಚ್ಚಾದರೆ ಭೂಮಿಯ ಅಭಿವೃದ್ಧಿ ಸಾಮರ್ಥ್ಯ ಹಾಗೂ ಭವಿಷ್ಯದ ವಾಣಿಜ್ಯ ಬಳಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಜನವಸತಿ ಮತ್ತು ಕೃಷಿ ಪ್ರದೇಶಗಳನ್ನು ಹೊರಗಿಟ್ಟು ವೈಜ್ಞಾನಿಕವಾಗಿ ಮರುಸರ್ವೆ ನಡೆಸುವ ಅಗತ್ಯವಿದೆ ಎಂದರು.

‘ಜನರ ಹಿತದೃಷ್ಟಿಯಿಂದ ಮಾರ್ಪಾಡು ಅಗತ್ಯ’

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಮುನ್ನ ಅಗತ್ಯ ಮಾರ್ಪಾಡುಗಳನ್ನು ಮಾಡಲೇಬೇಕು ಎಂದರು.

ಅರಣ್ಯದಲ್ಲಿನ ವನವಾಸಿಗಳು ಹಲವು ದಶಕಗಳಿಂದ ಬದುಕು ಕಟ್ಟಿಕೊಂಡಿರುವುದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ, ಅಂದರೆ 1932ಕ್ಕೂ ಮುನ್ನ ಭೂಸ್ವಾಧೀನ ಪಡೆದುಕೊಂಡ ಜಮೀನುಗಳನ್ನೂ ಅರಣ್ಯ ಭೂಮಿ ವ್ಯಾಪ್ತಿಗೆ ಸೇರಿಸಿರುವುದು ಸರಿಯಲ್ಲ ಎಂದು ಹೇಳಿದರು.

ಮಲೆನಾಡಿನ ಜನವಸತಿ ಪ್ರದೇಶಗಳನ್ನು ESA ವ್ಯಾಪ್ತಿಯಿಂದ ಹೊರಗಿಡಬೇಕು. ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆಗೆ ಸಂಪೂರ್ಣ ರಕ್ಷಣೆ ನೀಡಬೇಕು. ರೈತರ ಸಾಮಾನ್ಯ ಮನೆ ನಿರ್ಮಾಣಕ್ಕೆ ಅನಗತ್ಯ ನಿರ್ಬಂಧ ಇರಬಾರದು. ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಕುಡಿಯುವ ನೀರು ಹಾಗೂ ವಿದ್ಯುತ್‌ನಂತಹ ಮೂಲಸೌಕರ್ಯ ಯೋಜನೆಗಳಿಗೆ ವಿಶೇಷ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮವಾರು ಮಾತ್ರವಲ್ಲದೆ ಭೂಮಿಯ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಮರುಸರ್ವೆ ನಡೆಸಬೇಕು. ಕಾಡು ಪ್ರದೇಶ, ನದಿ ಮೂಲ ಹಾಗೂ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳನ್ನು ಮಾತ್ರ ಕಟ್ಟುನಿಟ್ಟಾಗಿ ರಕ್ಷಿಸಬೇಕು. ಸ್ಥಳೀಯ ಗ್ರಾಮಸ್ಥರು, ರೈತರು, ಜನಪ್ರತಿನಿಧಿಗಳು ಹಾಗೂ ತಜ್ಞರನ್ನು ಒಳಗೊಂಡ ಸಾರ್ವಜನಿಕ ಸಮಾಲೋಚನೆ ನಡೆಸಬೇಕು ಎಂದರು.

ಜಿಲ್ಲೆಯಲ್ಲಿ ಬರದ ಆತಂಕ

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಕೆರೆ-ಕಟ್ಟೆ ಹಾಗೂ ಕಾಲುವೆಗಳು ಬರಿದಾಗಿವೆ. ಇದರಿಂದ ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ಕೃಷಿ ಚಟುವಟಿಕೆಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸಂಬಂಧಿಸಿದ ಇಲಾಖೆಗಳು ಸಂಭಾವ್ಯ ಸಮಸ್ಯೆಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು.

ಏತ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳ ಕೆರೆಗಳನ್ನು ತ್ವರಿತವಾಗಿ ತುಂಬಿಸಲು ಹಾಗೂ ನೀರು ಎತ್ತಿ ಸಾಗಿಸಲು ವಿದ್ಯುತ್ ಕೊರತೆಯಾಗದಂತೆ ಕ್ರಮವಹಿಸಬೇಕು. ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಾಡಿಕೆಗಿಂತ ಕಡಿಮೆ ಮಳೆಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ರೈತರ ಜೀವನ ನಿರ್ವಹಣೆ ದುಸ್ತರವಾಗುವ ಲಕ್ಷಣಗಳಿವೆ. ಭದ್ರಾವತಿ ತಾಲೂಕನ್ನು ಬರಪೀಡಿತ ತಾಲೂಕಾಗಿ ಪರಿಗಣಿಸಿರುವ ಮಾದರಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಳೆ ಮಾಪನ ಕೇಂದ್ರಗಳ ಅಸಮರ್ಪಕ ಅಳತೆಯಿಂದ ಬೆಳೆ ವಿಮೆ ಪರಿಹಾರದಲ್ಲಾಗುತ್ತಿರುವ ವ್ಯತ್ಯಯಗಳನ್ನು ಸರಿಪಡಿಸಿ, ವಿಮಾ ಇಲಾಖೆಗೆ ವಾಸ್ತವಿಕ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೆ, ರಸ್ತೆ ಮತ್ತು ಜಲಜೀವನ್ ಮಿಷನ್ ಕಾಮಗಾರಿಗಳ ಪರಿಶೀಲನೆ

ಜಿಲ್ಲೆಗೆ ಹೊಸದಾಗಿ ಏಳು ರೈಲ್ವೆ ಕ್ರಾಸಿಂಗ್‌ಗಳು ಮಂಜೂರಾಗಿದ್ದು, ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದರು ಸೂಚಿಸಿದರು. ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಶಿರಾಳಕೊಪ್ಪ–ಸೊರಬ ರಸ್ತೆಯಲ್ಲಿ ಹೊಂಡ-ಗುಂಡಿಗಳಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಸರಿಪಡಿಸುವಂತೆ ಸೂಚಿಸಿದರು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ನಿರೀಕ್ಷಿತ ಪ್ರಗತಿ ಸಾಧಿಸದಿರುವುದನ್ನೂ ಗಂಭೀರವಾಗಿ ಪರಿಗಣಿಸಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಸೇರಿದಂತೆ ಸಮಿತಿಯ ನಾಮನಿರ್ದೇಶಿತ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಸೆ.30 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

JanaNota Editor

ತೀರ್ಥಹಳ್ಳಿ ಮತದಾರರ ಪಟ್ಟಿ ವಿಚಾರ : ಬಿಜೆಪಿ ಮುಖಂಡರ ದೂರಿಗೆ ಕಾಂಗ್ರೆಸ್ ಆಕ್ಷೇಪ

JanaNota Editor

8,355 ಹೊಸ ಕೊಠಡಿಗಳ ನಿರ್ಮಾಣ: ಮಧು ಬಂಗಾರಪ್ಪ

JanaNota Editor