ಜನ ನೋಟ
ರಾಜ್ಯ

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ: ಮಧು ಬಂಗಾರಪ್ಪ

ಶಿಕಾರಿಪುರ, ಸೆ.11: ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಏಳನೇ ಬಾರಿ ಕರಡು ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿ ಹಾಗೂ ವರದಿ ಜಾರಿಗೆ ವಿರೋಧಿಸಿ ಶಿಕಾರಿಪುರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಈಸೂರಿನಿಂದ ಶಿಕಾರಿಪುರದವರೆಗೆ ಶುಕ್ರವಾರ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪಾದಯಾತ್ರೆಯಲ್ಲಿ ಭಾಗವಹಿಸಿ, ರೈತರು, ಕೃಷಿ ಕಾರ್ಮಿಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಶಿಕಾರಿಪುರದ ತಾಲೂಕು ಕಚೇರಿವರೆಗೆ ಹೆಜ್ಜೆ ಹಾಕಿದರು.

ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, “ಕಸ್ತೂರಿ ರಂಗನ್ ವರದಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಮ್ಮ ಜನರ ಜೊತೆ ನಿಲ್ಲುವುದು ನನ್ನ ಕರ್ತವ್ಯ ಎಂದು ಭಾವಿಸಿ ಶಿಕಾರಿಪುರಕ್ಕೆ ಬಂದಿದ್ದೇನೆ” ಎಂದರು.

ಕೇಂದ್ರ ಸರ್ಕಾರ ಏಳನೇ ಬಾರಿ ಕರಡು ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿದ ಅವರು, “ನಮ್ಮ ರಾಜ್ಯದ ವಿರುದ್ಧ ಸದಾ ದ್ವೇಷ ಕಾರುವ ಕೇಂದ್ರ ಸರ್ಕಾರಕ್ಕೆ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಏಕೆ ಇಷ್ಟು ಹಠ?” ಎಂದು ಪ್ರಶ್ನಿಸಿದರು.

ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ

ಶಿಕಾರಿಪುರ ಜನತೆಯ ಪರಿಸ್ಥಿತಿ “ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ” ಎಂದು ಟೀಕಿಸಿದ ಮಧು ಬಂಗಾರಪ್ಪ, ಇಲ್ಲಿನ ಶಾಸಕರು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ತಮ್ಮದೇ ಕುಟುಂಬದ ಸಂಸದರು ಸಂಸತ್ತಿನಲ್ಲಿ ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಪಶ್ಚಿಮಘಟ್ಟದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಸಭೆ ಕರೆದಿದ್ದರೂ ನಮ್ಮ ಸಂಸದರು ಸಭೆಗೆ ತೆರಳದೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕಾಂಗ್ರೆಸ್ ನಿರಂತರವಾಗಿ ಜನರ ಪರವಾಗಿ ಹೋರಾಟ ನಡೆಸುತ್ತಿದೆ. ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಯೂ ಯಶಸ್ವಿಯಾಗಿದೆ. ಈಸೂರಿನಿಂದ ಶಿಕಾರಿಪುರದವರೆಗೆ ಇಂದು ಪಾದಯಾತ್ರೆ ನಡೆಸಿದ್ದು, “ಈ ವಿಚಾರವನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿದರು.

‘ಅಪ್ಪಾಜಿಗೆ ಕೊಟ್ಟಂತೆ ನನಗೂ ಹೃದಯದಲ್ಲಿ ಜಾಗ ನೀಡಿ’

ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಗೂ ಶಿಕಾರಿಪುರಕ್ಕೂ ಇದ್ದ ನಂಟನ್ನು ಸ್ಮರಿಸಿದ ಸಚಿವರು, ತಮ್ಮ ಕ್ಷೇತ್ರ ಸೊರಬ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವುದಿಲ್ಲವಾದರೂ ಶಿಕಾರಿಪುರದ ಜನರೊಂದಿಗೆ ನಿಲ್ಲಲು ಬಂದಿದ್ದೇನೆ ಎಂದರು.

“ನಮ್ಮ ತಂದೆಯವರು ಶಿಕಾರಿಪುರದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಕಾಂಗ್ರೆಸ್‌ನಿಂದ ಸಂಸದರಾದಾಗ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದವರು ಶಿಕಾರಿಪುರದ ಜನ. ನಿಮ್ಮ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ಇಲ್ಲಿಗೆ ಬಂದಿದ್ದೇನೆ. ಅಪ್ಪಾಜಿಗೆ ಕೊಟ್ಟಂತೆ ನನಗೂ ನಿಮ್ಮ ಹೃದಯದಲ್ಲಿ ಜಾಗ ನೀಡಿ” ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಭೂಮಿಯ ಹಕ್ಕು ನೀಡಿದ್ದರೆ, ಎಸ್. ಬಂಗಾರಪ್ಪ ಅವರು ಉಚಿತ ಪಂಪ್‌ಸೆಟ್ ಯೋಜನೆ ಜಾರಿಗೆ ತಂದಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ತೋಟಗಳ ವಿಸ್ತರಣೆಯಲ್ಲಿಯೂ ಬಂಗಾರಪ್ಪ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.

ಬಗರ್ ಹುಕುಂ ಅರ್ಜಿಗಳೇ ಶೇ.50

ಶಿಕಾರಿಪುರದಲ್ಲಿ ಇತ್ತೀಚೆಗೆ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ 624 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ ಸುಮಾರು ಶೇ.50ರಷ್ಟು ಬಗರ್ ಹುಕುಂ ಅರ್ಜಿಗಳಾಗಿವೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ತಮ್ಮ ಕ್ಷೇತ್ರದಲ್ಲಿ ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ವಿತರಿಸಿರುವುದಾಗಿ ಹೇಳಿದ ಅವರು, ಕಾಗೋಡು ತಿಮ್ಮಪ್ಪ ಅವರ ಆಶಯದಂತೆ ಅರ್ಹರೆಲ್ಲರಿಗೂ ಬಗರ್ ಹುಕುಂ ಹಕ್ಕುಪತ್ರ ನೀಡಿಸಲು ಕಾಂಗ್ರೆಸ್ ಬದ್ಧವಾಗಿದೆ. ತಾವು ವಿರೋಧ ಪಕ್ಷದಲ್ಲಿದ್ದಾಗಲೇ 6,200 ಬಗರ್ ಹುಕುಂ ಹಕ್ಕುಪತ್ರಗಳನ್ನು ವಿತರಿಸಿರುವುದಾಗಿ ಹೇಳಿದರು.

‘ಗ್ಯಾರಂಟಿ ಯೋಜನೆಗಳು ಜನರ ಮನೆ ತಲುಪಿವೆ’

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಸಚಿವರು, “ಹಸಿದವರ ಹೊಟ್ಟೆ ತುಂಬಿಸಿದ ಪುಣ್ಯಾತ್ಮ ಸಿದ್ದರಾಮಯ್ಯ. ಅವರು ನೀಡಿದ ಗ್ಯಾರಂಟಿ ಯೋಜನೆಗಳು ಇಂದು ರಾಜ್ಯದ ಪ್ರತಿಯೊಂದು ವರ್ಗದ ಜನರ ಮನೆ ತಲುಪಿವೆ” ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ: ಮಧು ಬಂಗಾರಪ್ಪ

ತಮ್ಮನ್ನು ಶಿಕ್ಷಣ ಸಚಿವರಾಗಿ ಮುಂದುವರಿಸಿರುವ ಕುರಿತು ಮಾತನಾಡಿದ ಅವರು, ಬಿಜೆಪಿ ನಾಯಕರು ತಾವು ಮತ್ತೆ ಸಚಿವರಾಗುವುದಿಲ್ಲ ಎಂದು ಟೀಕಿಸಿದ್ದರು. ಆದರೆ ತಮ್ಮ ಕಾರ್ಯವನ್ನು ಗುರುತಿಸಿ ಕಾಂಗ್ರೆಸ್ ನಾಯಕತ್ವ ಮತ್ತೊಮ್ಮೆ ಸಚಿವ ಸ್ಥಾನ ನೀಡಿದೆ ಎಂದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಶೇ.15ರಿಂದ 20ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ತಾವು ಶಿಕ್ಷಣ ಸಚಿವರಾದ ಬಳಿಕ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣ ಶೇ.2ಕ್ಕೆ ಇಳಿದಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಉಚಿತ ಶಿಕ್ಷಣದ ಜೊತೆಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಈ ವರ್ಷದಿಂದ 1ನೇ ತರಗತಿಯಿಂದ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ನೀಡಲಾಗುವುದು, ಇದರಿಂದ ಪೋಷಕರ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ್, ಮಾಜಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಶಿಕಾರಿಪುರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯ್ಕ್, ಗೋಣಿ ಮಾಲತೇಶ್, ಈರೇಶ್ ಎನ್.ವಿ., ರಾಘವೇಂದ್ರ ನಾಯ್ಕ್, ದರ್ಶನ್ ಉಳ್ಳಿ ಸೇರಿದಂತೆ ಯುವ ಕಾಂಗ್ರೆಸ್ ನಾಯಕರು, ಪಕ್ಷದ ಕಾರ್ಯಕರ್ತರು, ಮಹಿಳಾ ನಾಯಕಿಯರು ಹಾಗೂ ವಿವಿಧ ತಾಲೂಕುಗಳ ಮುಖಂಡರು ಉಪಸ್ಥಿತರಿದ್ದರು.

Related posts

ಚಿತ್ರದುರ್ಗ : ಪ್ರವಾಸಿ ಬಸ್ ಪಲ್ಟಿ : ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಜನರಿಗೆ ಗಾಯ

JanaNota Editor

ಅಕ್ಕಿ ಕಳ್ಳರ ಜತೆ ಪೊಲೀಸರ ‘ಡೀಲ್’: ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಸೇರಿ ನಾಲ್ವರು ಅಮಾನತು

JanaNota Editor

ತಂದೆಯ ಸಾವಿನ ಬಳಿಕ ಆಸ್ತಿ ಕಲಹ : ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಧರಣಿ

JanaNota Editor