ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ಕರ್ನಾಟಕ ರಾಜ್ಯಪಾಲರ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಾಧಿಪತಿಯಾಗಿರುವ ರಾಜ್ಯಪಾಲರ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಗಳಿಗಾಗಿ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ರಾಜ್ಯಪಾಲರ ಸಚಿವಾಲಯದ 02-09-2026ರ ಜಿಎಸ್ 07 ಕೆಪಿಎಂ 2024 (ಪಿ-1) ಸಂಖ್ಯೆಯ ನೋಟಿಸ್‌ನಲ್ಲಿ, ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ಪೂರ್ವಾನುಮತಿ ಪಡೆಯದೆ ವಿದೇಶ ಪ್ರವಾಸ ಕೈಗೊಂಡಿರುವ ಕುರಿತು ಕಾರಣ ಕೇಳಲಾಗಿದೆ.
ನಾಲ್ಕು ಬಾರಿ ಕೆನಡಾ ಪ್ರವಾಸ
ನೋಟಿಸ್‌ನಲ್ಲಿ ಉಲ್ಲೇಖಿಸಿರುವಂತೆ, ಪ್ರೊ. ಶರತ್ ಅನಂತಮೂರ್ತಿ ಅವರು ನಾಲ್ಕು ಬಾರಿ ಕೆನಡಾಕ್ಕೆ ಪ್ರವಾಸ ಕೈಗೊಂಡಿದ್ದಾರೆ.
-
ಮೊದಲ ಪ್ರವಾಸ: 19-06-2024ರಿಂದ 11-07-2024ರವರೆಗೆ ಸುಮಾರು 23 ದಿನ.
-
ಎರಡನೇ ಪ್ರವಾಸ: 16-12-2024ರಿಂದ 06-01-2025ರವರೆಗೆ ಸುಮಾರು 24 ದಿನ.
-
ಮೂರನೇ ಪ್ರವಾಸ: 14-07-2025ರಿಂದ 25-07-2025ರವರೆಗೆ ಸುಮಾರು 12 ದಿನ.
-
ನಾಲ್ಕನೇ ಪ್ರವಾಸ: 17-08-2026ರಿಂದ 09-09-2026ರವರೆಗೆ ಸುಮಾರು 20 ದಿನ.
ಮೇಲ್ಕಂಡ ಎಲ್ಲ ಪ್ರವಾಸಗಳನ್ನೂ ವೈಯಕ್ತಿಕ ಕಾರಣಗಳಿಗಾಗಿ ಕೈಗೊಂಡಿದ್ದು, ಪ್ರವಾಸಕ್ಕೂ ಮುನ್ನ ರಾಜ್ಯಪಾಲರ ಕಚೇರಿಯಿಂದ ಅಗತ್ಯ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಏಳು ದಿನಗಳಲ್ಲಿ ಉತ್ತರಕ್ಕೆ ಸೂಚನೆ
ಕುಲಾಧಿಪತಿಯ ಪೂರ್ವಾನುಮತಿ ಪಡೆಯದೆ ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸೂಕ್ತ ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ರಾಜ್ಯಪಾಲರ ಸಚಿವಾಲಯ ಸೂಚಿಸಿದೆ.
ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿನ ಪರಿಸ್ಥಿತಿಗಳು, ಪ್ರತಿ ಪ್ರವಾಸಕ್ಕೂ ಮುನ್ನ ಪೂರ್ವಾನುಮತಿ ಪಡೆಯದಿರುವ ಕಾರಣಗಳು ಸೇರಿದಂತೆ ಸಂಪೂರ್ಣ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ತಮ್ಮ ವಿವರಣೆಗೆ ಬೆಂಬಲವಾಗಿ ಅವಲಂಬಿಸಿರುವ ಎಲ್ಲ ಸಂಬಂಧಿತ ಹಾಗೂ ಪೂರಕ ದಾಖಲೆಗಳ ಪ್ರತಿಗಳೊಂದಿಗೆ ಲಿಖಿತ ಉತ್ತರವನ್ನು ನೋಟಿಸ್ ಸ್ವೀಕರಿಸಿದ ದಿನದಿಂದ ಏಳು ದಿನಗಳೊಳಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸದಿದ್ದಲ್ಲಿ, ತಮ್ಮ ಬಳಿ ಯಾವುದೇ ವಿವರಣೆ ಇಲ್ಲ ಎಂದು ಪರಿಗಣಿಸಲಾಗುವುದು. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ಎಚ್ಚರಿಕೆ ನೀಡಿದೆ.
