ಜನ ನೋಟ
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ 13.54 ಲಕ್ಷ ಮತದಾರರು: ಅಂತಿಮ ಪಟ್ಟಿ ಪ್ರಕಟ

ಶಿವಮೊಗ್ಗ,: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 13,54,046 ಮತದಾರರು ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಪರಿಷ್ಕರಣೆಗೂ ಮುನ್ನ ಜಿಲ್ಲೆಯಲ್ಲಿ 15,19,459 ಮತದಾರರಿದ್ದರು. ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 13,30,905 ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ ಕರಡು ಪಟ್ಟಿಗೆ ಹೋಲಿಸಿದರೆ 23,141 ಮತದಾರರ ಹೆಚ್ಚಳವಾಗಿದೆ ಎಂದು ವಿವರಿಸಿದರು.

ಅಂತಿಮ ಪಟ್ಟಿಯಲ್ಲಿ 6,67,100 ಪುರುಷರು, 6,86,921 ಮಹಿಳೆಯರು ಹಾಗೂ 25 ತೃತೀಯ ಲಿಂಗದ ಮತದಾರರು ಸೇರಿ ಒಟ್ಟು 13,54,046 ಸಾಮಾನ್ಯ ಮತದಾರರಿದ್ದಾರೆ. ಇದರೊಂದಿಗೆ 648 ಸೇವಾ ಮತದಾರರನ್ನು ಗುರುತಿಸಲಾಗಿದೆ. ಪ್ರಸಕ್ತ ಪಟ್ಟಿಯಲ್ಲಿ 18ರಿಂದ 19 ವರ್ಷ ವಯಸ್ಸಿನ 19,510 ಯುವ ಮತದಾರರು ಸೇರ್ಪಡೆಯಾಗಿದ್ದಾರೆ ಎಂದರು.

48,660 ನೋಟಿಸ್‌ಗಳ ವಿಚಾರಣೆ ಪೂರ್ಣ

ಮತದಾರರ ಹೆಸರುಗಳ ಮ್ಯಾಪಿಂಗ್ ಆಗದಿರುವುದು ಹಾಗೂ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 48,660 ನೋಟಿಸ್‌ಗಳನ್ನು ನೀಡಲಾಗಿತ್ತು. ಈ ನೋಟಿಸ್‌ಗಳಿಗೆ ಸಂಬಂಧಿಸಿದ ವಿಚಾರಣೆ ಪೂರ್ಣಗೊಳಿಸಲಾಗಿದೆ. ಶಾಶ್ವತವಾಗಿ ಸ್ಥಳಾಂತರಗೊಂಡವರು, ವಿಳಾಸದಲ್ಲಿ ಪತ್ತೆಯಾಗದವರು, ಮೃತಪಟ್ಟವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡವರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಮಾತ್ರ ವ್ಯಕ್ತಿಯು ಮತದಾನಕ್ಕೆ ಅನರ್ಹರಾಗುವುದಿಲ್ಲ. ಅರ್ಹತೆಯನ್ನು ಸಾಬೀತುಪಡಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಬಹುದು. ಹೆಸರು ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ

– ಶಿವಮೊಗ್ಗ ಗ್ರಾಮಾಂತರ: 2,04,780

– ಭದ್ರಾವತಿ: 1,78,264

– ಶಿವಮೊಗ್ಗ ನಗರ: 2,24,699

– ತೀರ್ಥಹಳ್ಳಿ: 1,80,115

– ಶಿಕಾರಿಪುರ: 1,86,279

– ಸೊರಬ: 1,85,649

– ಸಾಗರ: 1,94,260

ಜಿಲ್ಲೆಯಲ್ಲಿ ನಗರ ಪ್ರದೇಶಗಳಲ್ಲಿ 637 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1,249 ಸೇರಿದಂತೆ ಒಟ್ಟು 1,886 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ 1,150ರಿಂದ 1,200 ಮತದಾರರಿಗೆ ಸೀಮಿತಗೊಳಿಸುವ ಉದ್ದೇಶದಿಂದ ಪರಿಶೀಲನೆ ನಡೆಸಲಾಗಿದೆ ಎಂದರು.

ಮತದಾರರ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ನಿಯೋಜಿತರಾಗಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ₹5 ಲಕ್ಷ ಸಹಾಯಧನ ನೀಡಲು ಸರ್ಕಾರ ಅನುಮತಿ ನೀಡಿದೆ. ಶೀಘ್ರದಲ್ಲೇ ಹಣವನ್ನು ಕುಟುಂಬದವರಿಗೆ ತಲುಪಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಹಾಗೂ ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆ : SIR ರದ್ದತಿಗೆ ಒತ್ತಾಯ

JanaNota Editor

ಶಿವಮೊಗ್ಗದಲ್ಲಿ ಅ.10, 11ರಂದು ಕಾರ್ನಿವಾಲ್, ಸಾಂಸ್ಕೃತಿಕ ಸಂಭ್ರಮ

JanaNota Editor

ಮಕ್ಕಳೊಂದಿಗೆ ಕೆಸರು ಗದ್ದೆಗಿಳಿದ PSI; ಭತ್ತದ ನಾಟಿ ಮಾಡಿ ಕೃಷಿ ಪಾಠ

JanaNota Editor