ಜನ ನೋಟ
ಶಿವಮೊಗ್ಗ

ಮಕ್ಕಳೊಂದಿಗೆ ಕೆಸರು ಗದ್ದೆಗಿಳಿದ PSI; ಭತ್ತದ ನಾಟಿ ಮಾಡಿ ಕೃಷಿ ಪಾಠ

ಶಿವಮೊಗ್ಗ : ಮಲೆನಾಡು ಟುಡೆ ನ್ಯೂಸ್: ಖಾಕಿ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಶಾಲಾ ಮಕ್ಕಳೊಂದಿಗೆ ಕೆಸರು ಗದ್ದೆಗೆ ಇಳಿದು ಭತ್ತದ ಸಸಿ ನೆಡುವ ಮೂಲಕ ಗಮನ ಸೆಳೆದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮದಲ್ಲಿ ನಡೆದಿದೆ.

ಹೊನ್ನೇತಾಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಕೃಷಿ ಅಧ್ಯಯನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಆಗುಂಬೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಿವನಗೌಡ ಪಾಟೀಲ್ ಅವರು, ಮಕ್ಕಳೊಂದಿಗೆ ಗದ್ದೆಗಿಳಿದು ಭತ್ತದ ನಾಟಿ ಮಾಡಿದರು. ಅಲ್ಲದೆ, ಮಕ್ಕಳಿಗೆ ಹೂಟಿ ಮತ್ತು ನಾಟಿ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಪಾಠವಷ್ಟೇ ಅಲ್ಲದೆ, ಕೃಷಿ ಮತ್ತು ಗ್ರಾಮೀಣ ಬದುಕಿನ ಅನುಭವವನ್ನು ನೇರವಾಗಿ ಕಲಿಸಿಕೊಡುವ ಉದ್ದೇಶದಿಂದ ಪ್ರತಿವರ್ಷ ಗದ್ದೆ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಅದರಂತೆ ಈ ವರ್ಷವೂ ಶಾಲೆಯ ಸಮೀಪದ ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಸಸಿ ನೆಟ್ಟರು. ಮಣ್ಣಿನೊಂದಿಗೆ ಬೆರೆತು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ಮಕ್ಕಳು, ಗದ್ದೆ ನಾಟಿಯ ಅನುಭವವನ್ನು ಖುಷಿಯಿಂದ ಆನಂದಿಸಿದರು.

ಈ ವೇಳೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ PSI ಶಿವನಗೌಡ ಪಾಟೀಲ್ ಅವರು, ಕೃಷಿಯ ಮಹತ್ವ ಹಾಗೂ ರೈತರ ಶ್ರಮದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು.

ಖಾಕಿ ಸಮವಸ್ತ್ರದ ಅಧಿಕಾರಿಯೊಬ್ಬರು ಮಕ್ಕಳೊಂದಿಗೆ ಗದ್ದೆಗಿಳಿದು ಕೃಷಿ ಕಾರ್ಯದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಪೊಲೀಸ್ ಅಧಿಕಾರಿ ತೋರಿದ ಸರಳತೆ ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ಕೃಷಿಯ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡಲು ಕೈಗೊಂಡಿರುವ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಪುಸ್ತಕದ ಪಾಠದ ಜೊತೆಗೆ ಮಣ್ಣಿನ ಪಾಠ’ ಕಲಿಸುವ ಈ ಪ್ರಯತ್ನ ಗ್ರಾಮೀಣ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮತ್ತು ಗೌರವ ಬೆಳೆಸುವ ಉತ್ತಮ ಮಾದರಿಯಾಗಿದೆ.

 

 

Related posts

ಎಫ್‌ಸಿ, ವಿಮೆ ಇಲ್ಲದೆ ಸಂಚಾರ: 70 ಆಟೋಗಳು ಪೊಲೀಸರ ವಶಕ್ಕೆ

JanaNota Editor

ಶಿವಮೊಗ್ಗದಲ್ಲಿ ಆ.29ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

JanaNota Editor

ಶಿವಮೊಗ್ಗದಲ್ಲಿ ₹6 ಕೋಟಿ ಮೌಲ್ಯದ ಸರ್ಕಾರಿ ಜಾಗ ಒತ್ತುವರಿ ಆರೋಪ : ಸ್ಥಳ ಪರಿಶೀಲನೆ

JanaNota Editor