ಶಿವಮೊಗ್ಗ: ಅರುಣೋದಯ ಇವೆಂಟ್ಸ್ ವತಿಯಿಂದ ಅ.10 ಮತ್ತು 11ರಂದು ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕ್ನಲ್ಲಿ ‘ಶಿವಮೊಗ್ಗ ಕಾರ್ನಿವಾಲ್ ಬಿಗ್ಗೆಸ್ಟ್ ಆಟೋ ಎಕ್ಸ್ಪೋ ಆ್ಯಂಡ್ ಕಲ್ಚರಲ್ ಫೆಸ್ಟ್’ ಆಯೋಜಿಸಲಾಗಿದೆ ಎಂದು ಸಹಭಾಗಿತ್ವದ ಪೃಥ್ವಿ ಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಉತ್ಸವದಲ್ಲಿ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಪ್ರದರ್ಶನ ನಡೆಯಲಿದೆ. ಇದರ ಜತೆಗೆ ಗಾಯನ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ ಎಂದರು.
ಅ.10ರಂದು ಸಂಜೆ 5.30ರಿಂದ ಪೃಥ್ವಿ ಗೌಡ ಕಲ್ಚರಲ್ ಇವೆಂಟ್ಸ್ ವತಿಯಿಂದ ‘ನಾ ಹಾಡಲು ನೀವು ಹಾಡಬೇಕು’ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಹಳೆಯ ಹಾಗೂ ಹೊಸ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಿದರು.
ಅ.11ರಂದು ಬೆಳಿಗ್ಗೆ 7ಕ್ಕೆ ನವರಾತ್ರಿ ಅಂಗವಾಗಿ ಗೋ ಗ್ರೀನ್ ವತಿಯಿಂದ ‘ಸೀರೆ ವಾಕಥಾನ್’ ಆಯೋಜಿಸಲಾಗಿದೆ. ಸಂಜೆ 6ರಿಂದ ರಾಗ ವಸ್ತ್ರಂ ವತಿಯಿಂದ ‘ನೃತ್ಯೋತ್ಸವ’ ನಡೆಯಲಿದ್ದು, ಬಳಿಕ ಬಿ.ಎಸ್. ಚೆನ್ನಬಸಪ್ಪ ಆ್ಯಂಡ್ ಸನ್ಸ್ ಸಹಯೋಗದಲ್ಲಿ ‘ಗೋಲ್ಡನ್ ವಾಯ್ಸ್ ಆಫ್ ಮಲೆನಾಡು ಸೀಸನ್–2’ ಗಾಯನ ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಗಿರಿಜಾ ಗೌಡ, ಚನ್ನೇಶ್ ಆಚಾರ್ಯ, ಅಭಿಷೇಕ್, ನಿರಂಜನಿ ರವೀಂದ್ರ, ಉಜ್ವಲ ರವಿ, ಶ್ವೇತಾ ಆಚಾರ್ಯ, ರಘು ಗುಂಡ್ಲು ಹಾಗೂ ಮುರುಳಿ ಉಪಸ್ಥಿತರಿದ್ದರು.
