ಶಿವಮೊಗ್ಗ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ರಾಜ್ಯಾದ್ಯಂತ ತೆರೆಕಾಣಲು ಕ್ಷಣಗಣನೆ ಆರಂಭವಾಗಿದ್ದು, ಶಿವಮೊಗ್ಗದಲ್ಲಿ ಯಶ್ ಅಭಿಮಾನಿಗಳ ಸಂಭ್ರಮ ಈಗಾಗಲೇ ಮುಗಿಲುಮುಟ್ಟಿದೆ.
ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು ಚಿತ್ರಮಂದಿರಗಳ ಮುಂಭಾಗ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ನಗರದಲ್ಲಿ ಈಗಾಗಲೇ ‘ಯಶ್ ಮೇನಿಯಾ’ ಶುರುವಾಗಿದೆ.
ನಗರದ ಮಲ್ಲಿಕಾರ್ಜುನ ಚಲನಚಿತ್ರಮಂದಿರದ ಮುಂಭಾಗ ಯಶ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಬೃಹತ್ ಕಟೌಟ್‌ಗಳು ಹಾಗೂ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಯಶ್ ಅವರ ಕಟೌಟ್‌ಗೆ ಜೆಸಿಬಿ ಮೂಲಕ ಬೃಹತ್ ಹೂವಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಇದರೊಂದಿಗೆ ಡೊಳ್ಳು ಕುಣಿತದ ಮೂಲಕವೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಅಭಿಮಾನಿ ಬಳಗಗಳ ವತಿಯಿಂದ ಚಿತ್ರಮಂದಿರದ ಸುತ್ತಮುತ್ತ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ಇಡೀ ಪ್ರದೇಶವೇ ಯಶ್‌ಮಯವಾಗಿದೆ.
ಅಭಿಮಾನಿಗಳು ಯಶ್ ಪರ ಘೋಷಣೆಗಳನ್ನು ಕೂಗುತ್ತಾ, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡುಬಂದವು.
ನಾಳೆ ನಡೆಯಲಿರುವ ಬೆಳಗಿನ ಅಭಿಮಾನಿಗಳ ವಿಶೇಷ ಪ್ರದರ್ಶನವನ್ನು ಮತ್ತಷ್ಟು ಅದ್ದೂರಿಯಾಗಿಸಲು ಸಿದ್ಧತೆಗಳು ನಡೆಯುತ್ತಿವೆ. ಯಶ್ ಅವರ ಹಾಡುಗಳಿಗೆ, ಅದರಲ್ಲೂ ‘ಕೆಜಿಎಫ್’ ಚಿತ್ರದ ಹಾಡುಗಳಿಗೆ ಲೇಜರ್ ಲೈಟ್ ಪ್ರದರ್ಶನ ಸೇರಿದಂತೆ ವಿವಿಧ ರೀತಿಯ ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜಾಗಿದ್ದಾರೆ.
ಚಿತ್ರ ಬಿಡುಗಡೆಯ ಮುನ್ನವೇ ಶಿವಮೊಗ್ಗದಲ್ಲಿ ‘ಟಾಕ್ಸಿಕ್’ ಹವಾ ಜೋರಾಗಿದ್ದು, ಅಭಿಮಾನಿಗಳ ಸಂಭ್ರಮ ಚಿತ್ರಮಂದಿರಗಳ ಮುಂಭಾಗಕ್ಕೆ ವಿಶೇಷ ಕಳೆ ತಂದಿದೆ.
ಒಟ್ಟಿನಲ್ಲಿ, ‘ಟಾಕ್ಸಿಕ್’ ಬಿಡುಗಡೆಗೂ ಮುನ್ನವೇ ಶಿವಮೊಗ್ಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮೇನಿಯಾ ಮುಗಿಲುಮುಟ್ಟಿದೆ.
