ಜನ ನೋಟ
ರಾಜ್ಯ

ಬಿಜೆಪಿ–ಜೆಡಿಎಸ್ ಸಮನ್ವಯ ಸಭೆಯಲ್ಲಿ ಗಲಾಟೆ : ಕೈಕೈ ಮಿಲಾಯಿಸಿಕೊಂಡ ಕಾರ್ಯಕರ್ತರು

ಕೋಲಾರ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಗದ್ದಲ ಹಾಗೂ ಘರ್ಷಣೆ ನಡೆದಿದೆ.

ಮಾಲೂರು ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಮಾಜಿ ಶಾಸಕ ಹಾಗೂ ಬಿಜೆಪಿಯ ಕೆ.ಎಸ್. ಮಂಜುನಾಥಗೌಡ ಅವರ ಬೆಂಬಲಿಗರು ಜೆಡಿಎಸ್ ಸಂಸದ ಎಂ. ಮಲ್ಲೇಶ್ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಜೆಡಿಎಸ್ ಕಾರ್ಯಕರ್ತರು ಕೆರಳಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಕೂಗಾಟ ಹಾಗೂ ನೂಕಾಟ ನಡೆದಿದೆ.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಕೆಲವರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಘರ್ಷಣೆ ತಡೆಯಲು ಪಕ್ಷದ ಮುಖಂಡರು ಹಲವು ಬಾರಿ ಪ್ರಯತ್ನಿಸಿದರೂ ಪರಿಸ್ಥಿತಿ ತಕ್ಷಣ ನಿಯಂತ್ರಣಕ್ಕೆ ಬರಲಿಲ್ಲ ಎನ್ನಲಾಗಿದೆ.

ಘಟನೆಯ ಬಳಿಕ ಮಾಲೂರು ಬಿಜೆಪಿ ಕಾರ್ಯಕರ್ತರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಮಲ್ಲೇಶ್ ಬಾಬು ವಿರುದ್ಧ ಆಕ್ರೋಶ

2024ರ ಲೋಕಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಲ್ಲೇಶ್ ಬಾಬು ಅವರ ಗೆಲುವಿಗೆ ಶ್ರಮಿಸಿದ್ದರು. ಆದರೆ ಇದೀಗ ತಮ್ಮನ್ನು ಕಡೆಗಣಿಸಲಾಗುತ್ತಿದೆ. ಮಾಜಿ ಶಾಸಕ ಮಂಜುನಾಥಗೌಡ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.

ಮೈತ್ರಿಕೂಟದ ಧರ್ಮವನ್ನು ಪಾಲಿಸಲಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಸಮನ್ವಯ ಸಮಿತಿ ಸಭೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ಅವರನ್ನು ಆಹ್ವಾನಿಸದಿರುವುದಕ್ಕೆ ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಂಸದ ಎಂ. ಮಲ್ಲೇಶ್ ಬಾಬು, ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಮಾಜಿ ಸಂಸದ ಎಸ್. ಮುನಿಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

ತಂದೆಯ ಸಾವಿನ ಬಳಿಕ ಆಸ್ತಿ ಕಲಹ : ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಧರಣಿ

JanaNota Editor

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

JanaNota Editor

BJP ಯುವ ಮೋರ್ಚಾದಿಂದ ತೇಜಸ್ವಿ ಸೂರ್ಯಗೆ ಗೇಟ್ ಪಾಸ್

JanaNota Editor