ಜನ ನೋಟ
ಶಿವಮೊಗ್ಗ

ಶಿವಮೊಗ್ಗ : ವಾಟರ್ ಪ್ಯೂರಿಫೈಯರ್ ಕಂಪನಿಗೆ ದಂಡ : ಗ್ರಾಹಕನಿಗೆ ₹3.04 ಲಕ್ಷ ಪರಿಹಾರ

ಶಿವಮೊಗ್ಗ : ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಭರವಸೆ ನೀಡಿ ವಾಟರ್ ಪ್ಯೂರಿಫೈಯರ್ ಮಾರಾಟ ಮಾಡಿ, ಬಳಿಕ ಹಣವನ್ನು ಸಂಪೂರ್ಣವಾಗಿ ವಾಪಸ್ ನೀಡದೆ ಸೇವಾ ನ್ಯೂನ್ಯತೆ ಎಸಗಿದ ಆರೋಪದ ಪ್ರಕರಣದಲ್ಲಿ ಎನಾಜಿಕ್ ಇಂಟರ್‌ನ್ಯಾಷನಲ್ ಕಂಪನಿ ಹಾಗೂ ಅದರ ಡಿಸ್ಟ್ರಿಬ್ಯೂಟರ್‌ಗಳಿಗೆ ಗ್ರಾಹಕನಿಗೆ ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

₹2.77 ಲಕ್ಷಕ್ಕೆ ವಾಟರ್ ಪ್ಯೂರಿಫೈಯರ್ ಖರೀದಿ

ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಶಿವಕುಮಾರ ಹಂಪಳ್ಳಿ ಅವರು 2024ರ ಜೂನ್ 12ರಂದು ಎನಾಜಿಕ್ ಇಂಟರ್‌ನ್ಯಾಷನಲ್ ಕಂಪನಿಯ ಶಿವಮೊಗ್ಗದ ಡಿಸ್ಟ್ರಿಬ್ಯೂಟರ್ ಬಸವಣ್ಣ ಹಾಗೂ ಮೈಸೂರಿನ ಕೆ. ಅರುಣ್ ಕುಮಾರ್ ಅವರ ಮೂಲಕ ₹2,77,000 ನೀಡಿ ವಾಟರ್ ಪ್ಯೂರಿಫೈಯರ್ ಖರೀದಿಸಿದ್ದರು.

ಯಂತ್ರದ ನೀರನ್ನು ಒಂದು ತಿಂಗಳು ಬಳಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಯಂತ್ರವನ್ನು ವಾಪಸ್ ಪಡೆದು ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಆದರೆ ನೀರನ್ನು ಬಳಸಿದ ಬಳಿಕ ವೈದ್ಯಕೀಯ ತಪಾಸಣೆ ನಡೆಸಿದಾಗ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವ ಬದಲು ಹೆಚ್ಚಾಗಿತ್ತು ಎಂದು ದೂರುದಾರರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಂತ್ರವನ್ನು ವಾಪಸ್ ಪಡೆದು ಹಣ ಹಿಂದಿರುಗಿಸುವಂತೆ ಎದುರುದಾರರನ್ನು ಸಂಪರ್ಕಿಸಿದ್ದರು.

₹12,350 ಮಾತ್ರ ವಾಪಸ್

ಯಂತ್ರವನ್ನು ವಾಪಸ್ ಪಡೆದುಕೊಂಡ ಎದುರುದಾರರು, ದೂರುದಾರರಿಗೆ ಸಂಪೂರ್ಣ ಹಣವನ್ನು ಹಿಂದಿರುಗಿಸದೆ ಕೇವಲ ₹12,350 ಮಾತ್ರ ಪಾವತಿಸಿದ್ದರು. ಉಳಿದ ಹಣಕ್ಕಾಗಿ ಹಲವು ಬಾರಿ ಮನವಿ ಹಾಗೂ ಕಾನೂನು ನೋಟಿಸ್ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಶಿವಕುಮಾರ ಹಂಪಳ್ಳಿ ಅವರು ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಆಯೋಗದಿಂದ ಮಹತ್ವದ ಆದೇಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ, ಕಂಪನಿಯು ನೀಡಿದ್ದ ಭರವಸೆಯಂತೆ ನಡೆದುಕೊಳ್ಳದೆ ಸೇವಾ ನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿತು.

ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ₹2,64,650 ಅನ್ನು ಆದೇಶದ ದಿನಾಂಕದಿಂದ 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಶೇ.9ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಸೂಚಿಸಿದೆ.

ಇದರ ಜೊತೆಗೆ ಮಾನಸಿಕ ವೇದನೆಗಾಗಿ ₹30,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ₹10,000 ಪಾವತಿಸುವಂತೆ ಆದೇಶಿಸಲಾಗಿದೆ. ಈ ಮೊತ್ತವನ್ನು 45 ದಿನಗಳೊಳಗೆ ಪಾವತಿಸದಿದ್ದಲ್ಲಿ ಶೇ.10ರ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಆಯೋಗ ತಿಳಿಸಿದೆ.

Related posts

ಭದ್ರಾವತಿ : ದನದ ಕೊಟ್ಟಿಗೆಯಲ್ಲಿ ಮೂರು ಮುಳ್ಳುಹಂದಿಗಳ ಮೃತದೇಹ ಪತ್ತೆ: ಮೂವರು ಆರೋಪಿಗಳ ಬಂಧನ

JanaNota Editor

ಅರಣ್ಯ ಸಂಚಾರಿದಳ ದಿಢೀರ್ ದಾಳಿ : 21 ಕೆ.ಜಿ ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ

JanaNota Editor

ಸೆ.29ರಂದು ಕೆಎಸ್‌ಸಿಎ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ : ಡಿ.ಎಸ್. ಅರುಣ್

JanaNota Editor