ಶಿವಮೊಗ್ಗ : ಮಲೆನಾಡಿನ ಕ್ರಿಕೆಟಿಗರಿಗೆ ಮಳೆಗಾಲದಲ್ಲೂ ನಿರಂತರ ಅಭ್ಯಾಸ ನಡೆಸಲು ಅನುಕೂಲವಾಗುವಂತೆ ನಗರದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸೆ.29ರಂದು ಶಂಕುಸ್ಥಾಪನೆ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಸ್‌ಸಿಎ ನಿರ್ದೇಶಕ ಡಿ.ಎಸ್. ಅರುಣ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ವಿವಿಧ ವಯೋಮಾನದ ಕ್ರಿಕೆಟಿಗರಿಗೆ ನಿರಂತರ ಅಭ್ಯಾಸ ನಡೆಸಲು ತೊಂದರೆಯಾಗುತ್ತಿದೆ. ಹಲವು ವರ್ಷಗಳ ಬೇಡಿಕೆಯ ಹಿನ್ನೆಲೆಯಲ್ಲಿ ಒಳಾಂಗಣ ಅಭ್ಯಾಸ ವ್ಯವಸ್ಥೆ ನಿರ್ಮಿಸಲಾಗುತ್ತಿದೆ ಎಂದರು.
ಒಳಾಂಗಣ ಕ್ರೀಡಾಂಗಣಕ್ಕೆ ಸುಮಾರು ₹4.90 ಕೋಟಿ ವೆಚ್ಚವಾಗಲಿದ್ದು, ಹೊರಾಂಗಣ ಮೈದಾನದಲ್ಲಿ ಆಡುವ ಅನುಭವ ನೀಡುವ ರೀತಿಯಲ್ಲಿ ಒಳಾಂಗಣ ಟರ್ಫ್ ವ್ಯವಸ್ಥೆ ಹಾಗೂ ನಾಲ್ಕು ಪಿಚ್‌ಗಳನ್ನು ನಿರ್ಮಿಸಲಾಗುವುದು. ಆಟಗಾರರಿಗೆ ಜಿಮ್ ಸೇರಿದಂತೆ ಅಗತ್ಯ ತರಬೇತಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಕೆಎಸ್‌ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
₹5.80 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ
ಕೆಎಸ್‌ಸಿಎ ಮೈದಾನದ ಸಮೀಪದ ಕೆರೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು ₹5.80 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮುಂದಿನ ಹಂತದ ಅನುಮೋದನೆಗಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರುಣ್ ತಿಳಿಸಿದರು.
ಶಿವಮೊಗ್ಗವನ್ನು ಕ್ರಿಕೆಟ್ ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೂಲಸೌಕರ್ಯ, ಪಂದ್ಯಾವಳಿ ಹಾಗೂ ತರಬೇತಿ ವ್ಯವಸ್ಥೆಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಶಿವಮೊಗ್ಗಕ್ಕೆ ಬಂದು ಪಂದ್ಯಗಳನ್ನು ಆಡುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.
ಶೀಘ್ರ ಫ್ಲಡ್‌ಲೈಟ್ ವ್ಯವಸ್ಥೆ
ನವುಲೆ ಕ್ರೀಡಾಂಗಣದಲ್ಲಿ ಆಧುನಿಕ ಫ್ಲಡ್‌ಲೈಟ್ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ ಎಂದು ಡಿ.ಎಸ್. ಅರುಣ್ ಹೇಳಿದರು.
ಫ್ಲಡ್‌ಲೈಟ್ ವ್ಯವಸ್ಥೆ ಜಾರಿಯಾದರೆ ರಾತ್ರಿ ವೇಳೆಯಲ್ಲೂ ತರಬೇತಿ ಹಾಗೂ ಪಂದ್ಯಗಳನ್ನು ಆಯೋಜಿಸಲು ಅನುಕೂಲವಾಗಲಿದೆ. 2027ರೊಳಗೆ ವ್ಯವಸ್ಥೆ ಜಾರಿಯಾದರೆ ಮಹಾರಾಜ ಟ್ರೋಫಿ ಪಂದ್ಯಗಳನ್ನು ಶಿವಮೊಗ್ಗದಲ್ಲೇ ಆಯೋಜಿಸುವ ಚಿಂತನೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಕ್ರಿಕೆಟ್ ಕ್ಲಬ್‌ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
