ಜನ ನೋಟ
ಶಿವಮೊಗ್ಗ

ತನು ಜ್ಯೂಸ್ ಸೆಂಟರ್ ಬಂದ್

ಶಿವಮೊಗ್ಗ: ಕೊಳೆತ ಹಾಗೂ ಕಳಪೆ ಗುಣಮಟ್ಟದ ಹಣ್ಣುಗಳನ್ನು ಬಳಸಿ ಜ್ಯೂಸ್ ತಯಾರಿಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಿಲಕನಗರದ ‘ತನು ಜ್ಯೂಸ್ ಸೆಂಟರ್’ ಮೇಲೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಉಪವಿಭಾಗಾಧಿಕಾರಿ ಡಾ. ಮೈತ್ರಿ, ತಹಶೀಲ್ದಾರ್ ರಾಜೀವ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ನಡೆಸಿದ ಪರಿಶೀಲನೆ ವೇಳೆ ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ಹಲವು ಹಣ್ಣುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕೆಲವು ಹಣ್ಣುಗಳ ಮೇಲೆ ಶಿಲೀಂಧ್ರ ಹಾಗೂ ಬೂಷ್ಟಿನ ಬೆಳವಣಿಗೆ ಕಂಡುಬಂದಿದ್ದು, ಶೀತಕೋಣೆಯಲ್ಲಿಯೂ ಕಳಪೆ ಸ್ಥಿತಿಯ ಹಣ್ಣುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿತ್ತೆಂಬ ಆರೋಪದ ಹಿನ್ನೆಲೆಯಲ್ಲಿ ಆಹಾರ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಲಾಗಿದೆ. ಹಣ್ಣುಗಳನ್ನು ಎಷ್ಟು ದಿನಗಳಿಂದ ಸಂಗ್ರಹಿಸಲಾಗಿತ್ತು ಎಂಬುದನ್ನು ಮೇಲ್ನೋಟದ ಪರಿಶೀಲನೆಯಿಂದ ಖಚಿತಪಡಿಸಲು ಸಾಧ್ಯವಿಲ್ಲ. ಅಗತ್ಯವಿದ್ದಲ್ಲಿ ಹಣ್ಣುಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟದ ಬಗ್ಗೆ ಸ್ಪಷ್ಟತೆ ಪಡೆಯಲಾಗುವುದು ಎಂದು ಡಾ. ಮೈತ್ರಿ ತಿಳಿಸಿದ್ದಾರೆ.

ಕಳಪೆ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಸೇವನೆಯಿಂದ ಸಾರ್ವಜನಿಕರ, ವಿಶೇಷವಾಗಿ ಮಕ್ಕಳು, ವಿದ್ಯಾರ್ಥಿಗಳು ಹಾಗೂ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆಹಾರ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪರಿಶೀಲನೆಯ ಹಿನ್ನೆಲೆಯಲ್ಲಿ ತನು ಜ್ಯೂಸ್ ಸೆಂಟರ್‌ನ ಪರವಾನಗಿ ರದ್ದುಪಡಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಮಳಿಗೆಯನ್ನು ಬಂದ್ ಮಾಡಲಾಗಿದೆ. ಸೆಂಟರ್‌ನ ಮತ್ತೊಂದು ಮಳಿಗೆಯನ್ನೂ ಪರಿಶೀಲಿಸಲಾಗುವುದು ಎಂದು ಡಾ. ಮೈತ್ರಿ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ತಿಲಕನಗರ ಸೇರಿದಂತೆ ಜಿಲ್ಲೆಯ ಸುಮಾರು 11ರಿಂದ 12 ಪ್ರದೇಶಗಳಲ್ಲಿ ಆಹಾರ ಮಳಿಗೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಂಸಾಹಾರಿ ಹೋಟೆಲ್‌ಗಳ ಮೇಲೂ ದಾಳಿ

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ತಿಲಕನಗರದಲ್ಲಿರುವ ಮಾಂಸಾಹಾರಿ ಹೋಟೆಲ್‌ಗಳ ಮೇಲೂ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿತು.

ಪರಿಶೀಲನೆ ವೇಳೆ ಸ್ವಚ್ಛತೆ ಕಾಪಾಡದ ಹೋಟೆಲ್ ಮಾಲೀಕರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಶುದ್ಧ ನೀರು ಬಳಸದಿರುವುದು, ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡದಿರುವುದು ಹಾಗೂ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಒದಗಿಸದಿರುವುದು ಕಂಡುಬಂದರೆ ಹೋಟೆಲ್‌ಗಳ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಸಿದರು.

ಹೋಟೆಲ್‌ಗಳಲ್ಲಿದ್ದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಯಿತು. ಆಹಾರ ತಯಾರಿಕೆಯಲ್ಲಿ ಬಣ್ಣ ಅಥವಾ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳ ಬಳಕೆ ಕಂಡುಬಂದರೆ ಪರವಾನಗಿ ರದ್ದುಪಡಿಸುವುದರ ಜೊತೆಗೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಡಾ. ಮೈತ್ರಿ ತಿಳಿಸಿದರು.

ಅಶುಚಿತ್ವ ಕಂಡುಬಂದ ಹೋಟೆಲ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿಯೂ ಸ್ವಚ್ಛತೆ ಕಾಪಾಡದಿರುವುದು ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ತಹಶೀಲ್ದಾರ್ ರಾಜೀವ್, ಕಂದಾಯಾಧಿಕಾರಿ ಸತೀಶ್, ಕಂದಾಯ ನಿರೀಕ್ಷಕ ಹೊತ್ತಾರೆ ಶಿವಕುಮಾರ್, ದೀಪಕ್ ಬಿ., ವಿನಾಯಕಸ್ವಾಮಿ ಜಿ.ಎಂ., ನಿಂಗರಾಜಪ್ಪ, ಮೋಹನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಪಾಟ್ನಾ ಮೃಗಾಲಯದಿಂದ ತ್ಯಾವರೆಕೊಪ್ಪಕ್ಕೆ ಬರಲಿವೆ 8 ತೋಳ, 4 ಘರಿಯಾಲ್

JanaNota Editor

ಶಿವಮೊಗ್ಗ ಕರ್ನಾಟಕ ಸಂಘ; 12 ಲೇಖಕರಿಗೆ ಪುಸ್ತಕ ಬಹುಮಾನ

JanaNota Editor

ಬ್ಯಾಂಕ್ ಮುಷ್ಕರದ ನಡುವೆ ಗ್ರಾಹಕರಿಗೆ ಬಿಗ್ ರಿಲೀಫ್; ಎಟಿಎಂ ವಹಿವಾಟು ಶುಲ್ಕ ಸಂಪೂರ್ಣ ರದ್ದು, ಎಷ್ಟು ಬಾರಿಯಾದರೂ ಉಚಿತವಾಗಿ ಹಣ ಡ್ರಾ ಮಾಡಿ

JanaNota Editor