ಶಿವಮೊಗ್ಗ: ಶಿವಮೊಗ್ಗ ಜನತೆಗೆ ಮತ್ತೊಂದು ಸಿಹಿಸುದ್ದಿ ದೊರೆತಿದ್ದು, ಆಂಧ್ರ ಪ್ರದೇಶದ ಮಚಿಲಿಪಟ್ಟಣಂ ಹಾಗೂ ಗುಂತಕಲ್ ನಡುವೆ ಶಿವಮೊಗ್ಗ ಮಾರ್ಗವಾಗಿ ಎರಡು ವಿಶೇಷ ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ದಕ್ಷಿಣ ಮಧ್ಯ ರೈಲ್ವೆ ಹಾಗೂ ನೈಋತ್ಯ ರೈಲ್ವೆಯ ಸಮನ್ವಯದಲ್ಲಿ ‘ಟ್ರೈನ್ ಆನ್ ಡಿಮ್ಯಾಂಡ್’ (Train on Demand–TOD) ಆಧಾರದ ಮೇಲೆ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಇದರಿಂದ ಶಿವಮೊಗ್ಗ ಹಾಗೂ ಆಂಧ್ರ ಪ್ರದೇಶದ ಪ್ರಮುಖ ನಗರಗಳ ನಡುವಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟು 20 ಬೋಗಿಗಳ ಈ ರೈಲಿನಲ್ಲಿ 1 ಫಸ್ಟ್ ಎಸಿ/ಸೆಕೆಂಡ್ ಎಸಿ ಸಂಯೋಜಿತ ಬೋಗಿ, 1 ಸೆಕೆಂಡ್ ಎಸಿ, 2 ಥರ್ಡ್ ಎಸಿ, 9 ಸ್ಲೀಪರ್, 5 ಜನರಲ್ ಹಾಗೂ 2 ಎಸ್‌ಎಲ್‌ಆರ್ (Seating-cum-Luggage Rake) ಬೋಗಿಗಳು ಇರಲಿವೆ.
ಮಚಿಲಿಪಟ್ಟಣಂ–ಶಿವಮೊಗ್ಗ ವಿಶೇಷ ರೈಲು
ರೈಲು ಸಂಖ್ಯೆ 07217: ಆಗಸ್ಟ್ 30ರಂದು ಮಚಿಲಿಪಟ್ಟಣಂನಿಂದ ಮಧ್ಯಾಹ್ನ 3.55ಕ್ಕೆ ಹೊರಟು, ಆಗಸ್ಟ್ 31ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ತಲುಪಲಿದೆ.
ರೈಲು ಸಂಖ್ಯೆ 07218: ಸೆಪ್ಟೆಂಬರ್ 2ರಂದು ಶಿವಮೊಗ್ಗದಿಂದ ಸಂಜೆ 5.40ಕ್ಕೆ ಹೊರಟು, ಸೆಪ್ಟೆಂಬರ್ 3ರಂದು ಮಧ್ಯಾಹ್ನ 3.55ಕ್ಕೆ ಮಚಿಲಿಪಟ್ಟಣಂ ತಲುಪಲಿದೆ.
ಶಿವಮೊಗ್ಗ–ಗುಂತಕಲ್ ವಿಶೇಷ ರೈಲು
ರೈಲು ಸಂಖ್ಯೆ 07219: ಆಗಸ್ಟ್ 31ರಂದು ಶಿವಮೊಗ್ಗದಿಂದ ಸಂಜೆ 5.40ಕ್ಕೆ ಹೊರಟು, ಸೆಪ್ಟೆಂಬರ್ 1ರಂದು ಬೆಳಿಗ್ಗೆ 7 ಗಂಟೆಗೆ ಗುಂತಕಲ್ ತಲುಪಲಿದೆ.
ರೈಲು ಸಂಖ್ಯೆ 07220: ಸೆಪ್ಟೆಂಬರ್ 2ರಂದು ಗುಂತಕಲ್‌ನಿಂದ ರಾತ್ರಿ 1.45ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ತಲುಪಲಿದೆ.
ಈ ವಿಶೇಷ ರೈಲುಗಳು ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಹಾಗೂ ಅನಂತಪುರ ಸೇರಿದಂತೆ ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸಲಿವೆ. ಇದರಿಂದ ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಆಂಧ್ರ ಪ್ರದೇಶದೊಂದಿಗೆ ರೈಲು ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.
ವಿಶೇಷ ರೈಲುಗಳ ವೇಳಾಪಟ್ಟಿ ಹಾಗೂ ಕಾಯ್ದಿರಿಸುವಿಕೆ ಸೌಲಭ್ಯ ICMS ಮತ್ತು NTES ವ್ಯವಸ್ಥೆಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರು ಮುಂಗಡ ಕಾಯ್ದಿರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಹಬ್ಬದ ಋತುವಿನಲ್ಲಿ ಶಿವಮೊಗ್ಗ ಹಾಗೂ ಆಂಧ್ರ ಪ್ರದೇಶದ ವಿವಿಧ ಭಾಗಗಳ ನಡುವೆ ಸಂಚರಿಸುವ ಸಾರ್ವಜನಿಕರಿಗೆ ಈ ವಿಶೇಷ ರೈಲುಗಳು ಹೆಚ್ಚಿನ ಅನುಕೂಲ ಕಲ್ಪಿಸಲಿವೆ. ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಯಾತ್ರಾರ್ಥಿಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಲಿದೆ. ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.
ಶಿವಮೊಗ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ತಮ್ಮ ಮನವಿಗೆ ಸ್ಪಂದಿಸಿ ವಿಶೇಷ ರೈಲು ಸೇವೆ ಒದಗಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ರವನೀತ್ ಸಿಂಗ್ ಬಿಟ್ಟು ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದ ಸಲ್ಲಿಸುವುದಾಗಿ ಸಂಸದರು ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ಇನ್ನಷ್ಟು ಉತ್ತಮ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿರಲಿವೆ. ಈ ವಿಶೇಷ ರೈಲುಗಳಿಗೆ ಉತ್ತಮ ಸ್ಪಂದನೆ ದೊರೆತರೆ ಮುಂದಿನ ದಿನಗಳಲ್ಲಿ ಈ ಮಾರ್ಗಗಳಲ್ಲಿ ನಿಯಮಿತ ರೈಲು ಸೇವೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
