ಜನ ನೋಟ
ಶಿವಮೊಗ್ಗ

ಭದ್ರಾವತಿಯಲ್ಲಿ ಮಹಿಳೆಯಿಂದ ಚಿನ್ನದ ಸರ ದೋಚಿದ್ದ ನಕಲಿ ಪೊಲೀಸರು ಅರೆಸ್ಟ್ : ₹4.35 ಲಕ್ಷದ ಚಿನ್ನ ವಶ

ಭದ್ರಾವತಿ: ತಾವು ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ಒಂಟಿಯಾಗಿ ತೆರಳುತ್ತಿದ್ದ ಮಹಿಳೆಯರಿಂದ ಚಿನ್ನಾಭರಣ ದೋಚುತ್ತಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ಅಂತಾರಾಜ್ಯ ವಂಚಕರನ್ನು ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಆಂಧ್ರಪ್ರದೇಶದ ಸೈಯದ್ ಅಬ್ಬಾಸ್ ಅಲಿ ಹಾಗೂ ಹುಸೇನ್ ಭಾಷಾ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು ₹4.35 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಲಾಪುರ ರಸ್ತೆಯಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳು ಆಕೆಯನ್ನು ಅಡ್ಡಗಟ್ಟಿದ್ದರು. ತಾವು ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ಅವರು, ಮುಂದೆ ಸರಗಳ್ಳತನದ ಅಪಾಯವಿದೆ ಎಂದು ಮಹಿಳೆಯನ್ನು ನಂಬಿಸಿದ್ದರು. ಬಳಿಕ ಆಕೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು.

ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ಹೆಚ್ಚುವರಿ ಎಸ್ಪಿ ಕಾರಿಯಪ್ಪ ಎ.ಜಿ. ಅವರ ನಿರ್ದೇಶನದಲ್ಲಿ, ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಠೋಡ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Related posts

ಬೀರುವಿನ ಲಾಕರ್‌ನಲ್ಲಿದ್ದ ₹4.64 ಲಕ್ಷದ ಚಿನ್ನಾಭರಣ ನಾಪತ್ತೆ : ಸಂಬಂಧಿಕನ ಮೇಲೆಯೇ ಅನುಮಾನ!

JanaNota Editor

ಅರಣ್ಯ ಸಂಚಾರಿದಳ ದಿಢೀರ್ ದಾಳಿ : 21 ಕೆ.ಜಿ ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ

JanaNota Editor

ಶಿವಮೊಗ್ಗ ಜಿಲ್ಲೆಯಲ್ಲಿ 39 ಜಿಪಂ, 113 ತಾಪಂ ಕ್ಷೇತ್ರಗಳ ಮರುವಿಂಗಡಣೆ ಅಧಿಸೂಚನೆ

JanaNota Editor