ಜನ ನೋಟ
ಶಿವಮೊಗ್ಗ

ರೈತರೇ ಗಮನಿಸಿ! ಶಿವಮೊಗ್ಗದಲ್ಲಿ ಅ.30ರಿಂದ 4 ದಿನಗಳ ಕೃಷಿ–ತೋಟಗಾರಿಕೆ ಮೇಳ

ಶಿವಮೊಗ್ಗ, ಅ.26: ಹವಾಮಾನ ವೈಪರೀತ್ಯ ಹಾಗೂ ಬರಗಾಲದ ಸವಾಲುಗಳನ್ನು ಎದುರಿಸಲು ರೈತರಿಗೆ ಅಗತ್ಯ ಮಾರ್ಗದರ್ಶನ ಮತ್ತು ನೂತನ ಕೃಷಿ ತಂತ್ರಜ್ಞಾನಗಳ ಪರಿಚಯ ನೀಡುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಅ.30ರಿಂದ ನ.2ರವರೆಗೆ ನಾಲ್ಕು ದಿನಗಳ ಕಾಲ ಬೃಹತ್ ಕೃಷಿ ಮತ್ತು ತೋಟಗಾರಿಕೆ ಮೇಳ ಆಯೋಜಿಸಲಾಗಿದೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ನಗರದ ನವಿಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ‘ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ’ ಎಂಬ ಧ್ಯೇಯವಾಕ್ಯದಡಿ ಮೇಳ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇಳದಲ್ಲಿ ಕೃಷಿ ಪರಿಕರಗಳು, ಬೀಜ–ರಸಗೊಬ್ಬರ, ಕೃಷಿ ಯಂತ್ರೋಪಕರಣಗಳು, ಸಸಿ–ಗಿಡಗಳು, ಮೌಲ್ಯವರ್ಧಿತ ಆಹಾರ ಸೇರಿದಂತೆ ವಿವಿಧ ವಿಭಾಗಗಳ 600ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ 15ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ಹಾಗೂ 80ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು ಭಾಗವಹಿಸಲಿವೆ ಎಂದರು.

ತಜ್ಞರಿಂದ ಮಹತ್ವದ ಸಂವಾದ

ಮೇಳದ ಸಂದರ್ಭದಲ್ಲಿ ರೈತರಿಗೆ ಉಪಯುಕ್ತವಾಗುವ ಹಲವು ವಿಷಯಗಳ ಕುರಿತು ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಲಿದೆ. ಅ.30ರಂದು ‘ಬರಕ್ಕೆ ಹೆದರದ ನೈಸರ್ಗಿಕ ಕೃಷಿ: ಜೀವಂತ ಮಣ್ಣಿನ ಜೀವಶಕ್ತಿ’, ಅ.31ರಂದು ‘ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ’ ಹಾಗೂ ನ.1ರಂದು ‘ಡಿಜಿಟಲ್ ಕೃಷಿ: ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ’ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಕೃಷಿ ಕ್ಷೇತ್ರದ ಹಲವು ವಿಶೇಷ ಆಕರ್ಷಣೆ

ಮೇಳದಲ್ಲಿ ಬರ ನಿರ್ವಹಣೆ, ಅಡಿಕೆ, ಮೀನುಗಾರಿಕೆ, ಹೈನುಗಾರಿಕೆ, ಕುರಿ–ಮೇಕೆ ಸಾಕಣೆ, ಏಡಿ ಸಾಕಣೆ, ಮುತ್ತು ಕೃಷಿ ಹಾಗೂ ಕೀಟ ಸಾಕಣೆಯ ಪ್ರಾತ್ಯಕ್ಷಿಕೆಗಳು ಇರಲಿವೆ. ಮಲೆನಾಡಿನಲ್ಲಿ ಅಪರೂಪವಾಗುತ್ತಿರುವ ಕಬ್ಬಿನ ಗಾಣದ ‘ಕೋಣದ ಕಣೆ’ ಪ್ರದರ್ಶನವೂ ವಿಶೇಷ ಆಕರ್ಷಣೆಯಾಗಲಿದೆ.

ಇದರ ಜೊತೆಗೆ ಶ್ವಾನ ಪ್ರದರ್ಶನ, ಹಸು–ಎಮ್ಮೆ ಹಾಗೂ ಕುರಿ–ಆಡು ಸ್ಪರ್ಧೆಗಳು, ಸಿರಿಧಾನ್ಯ ಪಾಕ ಸ್ಪರ್ಧೆ ಮತ್ತು ಮೀನುಗಾರಿಕೆ ಇಲಾಖೆಯ ‘ಮತ್ಸ್ಯಾಂಗಣ’ ಕೂಡ ನಡೆಯಲಿದೆ.

ಹೊಸ ತಂತ್ರಜ್ಞಾನಗಳ ಅನಾವರಣ

ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಬಹುಉಪಯೋಗಿ ಕೃಷಿ ಉಪಕರಣ ಹಾಗೂ ಸೌರಶಕ್ತಿ ಆಧಾರಿತ ಬಹುಧಾನ್ಯ ಸ್ವಚ್ಛಗೊಳಿಸುವ ಯಂತ್ರಕ್ಕೆ ಪೇಟೆಂಟ್ ದೊರೆತಿದೆ. ‘ಸಹ್ಯಾದ್ರಿ ಸಿಂಧೂರ’ ಕೆಂಪು ಭತ್ತ ಹಾಗೂ ‘ಸಹ್ಯಾದ್ರಿ ಪ್ರಗತಿ’ ಕಡಲೆ ತಳಿಗಳಿಗೆ ಕೇಂದ್ರದ ಅನುಮೋದನೆ ದೊರೆತಿದೆ.

ಮೇಳದಲ್ಲಿ ‘ಸಹ್ಯಾದ್ರಿ ಅನ್ನಪೂರ್ಣ’ ಹೊಸ ಭತ್ತದ ತಳಿ, ಕೃತಕ ಬುದ್ಧಿಮತ್ತೆ ಆಧಾರಿತ ಸಲಹಾ ವ್ಯವಸ್ಥೆ ಸೇರಿದಂತೆ ಹಲವು ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲಾಗುವುದು. ಏಳು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕಾರ್ಯಕ್ರಮವೂ ನಡೆಯಲಿದೆ.

ಮುಖ್ಯಮಂತ್ರಿಯಿಂದ ಉದ್ಘಾಟನೆ

ಕೃಷಿ ಮೇಳವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಪ್ರಗತಿಪರ ರೈತ ಸತ್ಯನಾರಾಯಣ ಬೇಲೆರಿ ಅವರು ಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪುಸ್ತಕ ಹಾಗೂ ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸಲಿದ್ದು, ಶಾಸಕಿ ಶಾರದಾ ಪೂರ್ಯಾನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಆರು ಜಿಲ್ಲೆಗಳ 12 ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಲೆನಾಡು ಹಾಗೂ ವಿಶ್ವವಿದ್ಯಾಲಯದ ವ್ಯಾಪ್ತಿಯ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಕುಲಪತಿ ಡಾ. ಎಂ.ವಿ. ಧನಂಜಯ ಮನವಿ ಮಾಡಿದ್ದಾರೆ.

Related posts

ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಗೆ ಕನ್ಸೋಲೇಶನ್ ಅವಾರ್ಡ್

JanaNota Editor

ವಿವಿಧ ಸ್ಪರ್ಧೆಗಳ ಮೂಲಕ ವಿಶಿಷ್ಟವಾಗಿ ಕೃಷ್ಣ ಜನ್ಮಾಷ್ಟಮಿ ಆಚರಣೆ

JanaNota Editor

ಶಿವಮೊಗ್ಗದಲ್ಲಿ ₹6 ಕೋಟಿ ಮೌಲ್ಯದ ಸರ್ಕಾರಿ ಜಾಗ ಒತ್ತುವರಿ ಆರೋಪ : ಸ್ಥಳ ಪರಿಶೀಲನೆ

JanaNota Editor