ಜನ ನೋಟ
ಶಿವಮೊಗ್ಗ

ಶಿವಮೊಗ್ಗದ ಕೈಗಾರಿಕೆಗಳಿಗೆ ಬಂಪರ್ ಅವಕಾಶ : ಅ.28, 29ರಂದು ಬೃಹತ್ ಉದ್ಯಮ ಮೇಳ

ಪ್ರಮುಖ ಸಂಸ್ಥೆಗಳೊಂದಿಗೆ ನೇರ ವ್ಯಾಪಾರ ಸಂಪರ್ಕ

ಶಿವಮೊಗ್ಗ: ಸ್ಥಳೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಸ ವ್ಯಾಪಾರ ಹಾಗೂ ಉದ್ಯಮಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ಭದ್ರಾವತಿ ಕೈಗಾರಿಕಾ ಸಂಘದ ವತಿಯಿಂದ ಅ.28 ಮತ್ತು 29ರಂದು ಮಾಚೇನಹಳ್ಳಿಯ ಉದ್ಯಮ ಭವನದಲ್ಲಿ ಬೃಹತ್ ಪೂರೈಕೆದಾರರ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಕೈಗಾರಿಕಾ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಲ್. ಚಂದ್ರಶೇಖರ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇ ಇಲಾಖೆ ಹಾಗೂ ವಿವಿಧ ಕೈಗಾರಿಕಾ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕೈಗಾರಿಕೆಗಳು ತಮ್ಮ ಉತ್ಪನ್ನಗಳು ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಪ್ರಮುಖ ಖರೀದಿದಾರ ಸಂಸ್ಥೆಗಳಿಗೆ ಪರಿಚಯಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ ಎಂದರು.

ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಸುಮಾರು 80ರಿಂದ 90 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 5,000ರಿಂದ 6,000 ಮಂದಿಗೆ ಉದ್ಯೋಗ ಕಲ್ಪಿಸಿವೆ. ಈ ಘಟಕಗಳಿಗೆ ಹೊಸ ಗ್ರಾಹಕರನ್ನು ಪರಿಚಯಿಸುವುದು, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಬೃಹತ್ ಕೈಗಾರಿಕೆಗಳಿಗೆ ಪೂರೈಕೆದಾರರಾಗಿ ಬೆಳೆಯಲು ನೆರವಾಗುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ದಕ್ಷಿಣ ಪಶ್ಚಿಮ ರೈಲ್ವೆ, ಭಾರತ್ ಎಲೆಕ್ಟ್ರಾನಿಕ್ಸ್, ರೈಲ್ ವೀಲ್ ಫ್ಯಾಕ್ಟರಿ, ಆರ್ಡಿನನ್ಸ್ ಫ್ಯಾಕ್ಟರಿ, ಕೊಚ್ಚಿನ್ ಶಿಪ್‌ಯಾರ್ಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಇದರಿಂದ ಕೈಗಾರಿಕೋದ್ಯಮಿಗಳಿಗೆ ಖರೀದಿ ಅಧಿಕಾರಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಹೊಸ ವ್ಯಾಪಾರ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದರು.

ಮೂವರು ಉದ್ಯಮಿಗಳಿಗೆ ‘ಕೈಗಾರಿಕಾ ರತ್ನ’ ಪ್ರಶಸ್ತಿ

ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಜಿಲ್ಲೆಯ ಮೂವರು ಹಿರಿಯ ಉದ್ಯಮಿಗಳಿಗೆ ‘ಕೈಗಾರಿಕಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಂತಲಾ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ರುದ್ರೇಗೌಡ ಎಸ್., ಮಲ್ನಾಡ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಮಧುಕರ್ ಜೋಯಿಸ್ ವೈ.ವಿ. ಹಾಗೂ ಪಿಯರ್ಲೈಟ್ ಲೈನರ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ಎಚ್.ಜಿ. ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

ಕೈಗಾರಿಕಾ ಕ್ಷೇತ್ರದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೂ ಆಹ್ವಾನ ನೀಡಲಾಗಿದೆ. ಕೈಗಾರಿಕೋದ್ಯಮಿಗಳು, ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ಪೂರೈಕೆದಾರರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ಮಾತನಾಡಿ, ಶಿವಮೊಗ್ಗದ ಸ್ಥಳೀಯ ಉತ್ಪಾದನೆಗೆ ಈ ಪ್ರದರ್ಶನ ಹೊಸ ಚೈತನ್ಯ ನೀಡಲಿದೆ. ಸ್ಥಳೀಯ ಕೈಗಾರಿಕೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಇಲ್ಲಿಯೇ ತಯಾರಿಸಲು ಈ ಕಾರ್ಯಕ್ರಮ ಪ್ರಮುಖ ಕೊಂಡಿಯಾಗಲಿದೆ. ಇದರಿಂದ ಜಿಲ್ಲೆಯ ಆರ್ಥಿಕ ಬೆಳವಣಿಗೆಗೂ ಉತ್ತೇಜನ ದೊರೆಯಲಿದೆ. ಎಲ್ಲ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಲಭ್ಯವಿರುವ ಸೌಲಭ್ಯ ಹಾಗೂ ವ್ಯಾಪಾರಾವಕಾಶಗಳನ್ನು ಬಳಸಿಕೊಂಡು ಶಿವಮೊಗ್ಗದ ಕೈಗಾರಿಕೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು ಎಂದರು.

ಎಸ್‌ಬಿಐಎ ಕಾರ್ಯದರ್ಶಿ ಎಸ್.ಎಸ್.ಟಿ. ರಾಜೇಶ್, ಎ.ಎಲ್. ಚಂದ್ರಶೇಖರ್, ಹೆಚ್.ಎಲ್. ದಿನೇಶ್, ಆಯನೂರು ಸಂತೋಷ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

ಶಿವಮೊಗ್ಗದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ ಫ್ಯಾಷನ್ ಶೋಗೆ ಚಾಲನೆ

JanaNota Editor

ತನು ಜ್ಯೂಸ್ ಸೆಂಟರ್ ಬಂದ್

JanaNota Editor

ಜಾತಿ ಹೆಸರಿನಲ್ಲಿ ನಿಂದನೆ – ಸುಂದರೇಶ್ ಸಮಾಜದ ಕ್ಷಮೆ ಕೇಳಬೇಕು : ಆರ್. ಪ್ರಸನ್ನ ಕುಮಾರ್

JanaNota Editor