ಮುಜಾಫರ್‌ನಗರ: ಕೇವಲ ಆರೇ ತಿಂಗಳಲ್ಲಿ 23 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರನ್ನು ಮುಜಾಫರ್‌ನಗರ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಅಲಹಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ತ್ವರಿತ ನ್ಯಾಯಾಲಯ ನ್ಯಾಯಾಧೀಶರಾಗಿದ್ದ ದಿವಾಕರ್ ಅವರನ್ನು ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ನ್ಯಾ. ರವಿಕುಮಾರ್ ಅವರ ಸ್ಥಾನಕ್ಕೆ ನ್ಯಾ. ಶಿವಕುಮಾರಿ ಅವರು ನೇಮಕಗೊಂಡಿದ್ದಾರೆ.
ನ್ಯಾ. ರವಿಕುಮಾರ್ ಅವರು ಇದೇ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 11 ಪ್ರಕರಣಗಳಲ್ಲಿ 23 ಮರಣದಂಡನೆ ತೀರ್ಪುಗಳನ್ನು ನೀಡಿದ್ದಾರೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಕೆ. ಸಿಂಗ್ ಅವರು ಆಗಸ್ಟ್‌ನಲ್ಲಿ ನೀಡಿದ್ದ ಆಡಳಿತಾತ್ಮಕ ಆದೇಶದ ಅನುಸಾರ, ಕೊಲೆ ಸೇರಿದಂತೆ ಇತರ ಗಂಭೀರ ಅಪರಾಧಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಬಾಕಿ ಇದ್ದ 97 ಪ್ರಕರಣಗಳನ್ನು ತ್ವರಿತ ನ್ಯಾಯಾಲಯದಿಂದ ಹಿಂಪಡೆಯಲಾಗಿತ್ತು. ಇದನ್ನು ನ್ಯಾ. ರವಿಕುಮಾರ್ ಪ್ರಶ್ನಿಸಿದ್ದರು.
