ಜನ ನೋಟ
ರಾಜ್ಯ

ಪಾರ್ಟಿಗೆ ಹೋದ ಜಿಮ್ ಟ್ರೈನರ್ ಶವವಾಗಿ ಮನೆಗೆ : ನಾಲ್ವರು ವಶಕ್ಕೆ

ಬೆಂಗಳೂರು : ಆ್ಯನಿವರ್ಸರಿ ಪಾರ್ಟಿ ಬಳಿಕ ನಡೆದ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಿಮ್ ಟ್ರೈನರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತರನ್ನು 25 ವರ್ಷದ ನಂದನ್ ಎಂದು ಗುರುತಿಸಲಾಗಿದೆ.

ಶನಿವಾರ ಜಿಮ್‌ನ ಮೊದಲ ವರ್ಷದ ಆ್ಯನಿವರ್ಸರಿ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ತಡವಾದರೆ ಬೆಳಗ್ಗೆ ಮನೆಗೆ ಬರುವುದಾಗಿ ನಂದನ್ ಕುಟುಂಬದವರಿಗೆ ತಿಳಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಿಬ್ಬಂದಿ ಹಾಗೂ ಪರಿಚಿತರೊಂದಿಗೆ ಅವರು ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಪಾರ್ಟಿ ಆಯೋಜಿಸಲಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಲಾಟೆ ವೇಳೆ ವಾಶ್‌ರೂಂನಲ್ಲಿ ಹೊಡೆದಾಟ ನಡೆದಿದ್ದು, ಗಾಜಿನ ವಸ್ತು ಒಡೆದು ನಂದನ್ ಅವರ ತಲೆಗೆ ಚುಚ್ಚಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಪ್ರಕರಣ ಸಂಬಂಧ ವಿಶ್ವನಾಥ, ವಿಜಯ್, ಶರತ್ ಹಾಗೂ ನಿಶಾಂತ್ ಎಂಬ ನಾಲ್ವರನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ನಂದನ್ ಜಿಮ್ ಟ್ರೈನರ್ ಆಗಿದ್ದರು. ವಶಕ್ಕೆ ಪಡೆದಿರುವ ನಾಲ್ವರೂ ಟ್ರೈನರ್‌ಗಳಾಗಿದ್ದಾರೆ. ಅನುಷ್ ಎಂಬಾತನಿಗೆ ನಂದನ್ ವೈಯಕ್ತಿಕ ಟ್ರೈನರ್ ಆಗಿದ್ದರು. ಅನುಷ್ ಅವರ ಮನೆಗೆ ಪಾರ್ಟಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ವೈಯಕ್ತಿಕ ಕಾರಣದಿಂದ ಗಲಾಟೆ ನಡೆದಿರುವ ಸಾಧ್ಯತೆ ಇದ್ದು, ಘಟನೆಗೆ ನಿಖರ ಕಾರಣವೇನು ಹಾಗೂ ನಂದನ್ ಮೇಲೆ ಹಲ್ಲೆ ಏಕೆ ನಡೆಯಿತು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಇನ್ನು ನಂದನ್ ತಾಯಿ, ತನ್ನ ಮಗನ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿರುವ ಅನುಮಾನವಿದೆ ಎಂದು ಆರೋಪಿಸಿದ್ದಾರೆ. ನಂದನ್ ದೇಹದ ಮೇಲೆ ಹಲ್ಲೆ ಹಾಗೂ ಕಚ್ಚಿದ ಗುರುತುಗಳಿದ್ದು, ತಲೆಯ ಹಿಂಭಾಗದಲ್ಲೂ ಗಾಯವಾಗಿದೆ ಎಂದು ಅವರು ಹೇಳಿದ್ದಾರೆ.

“ನನ್ನ ಮಗನೇ ನನಗೆ ಆಧಾರವಾಗಿದ್ದ. ಇಷ್ಟು ದಿನ ನನಗಾಗಿ ಕಷ್ಟಪಟ್ಟಿದ್ದ. ಮನೆಯಲ್ಲಿ ಎಲ್ಲ ಕೆಲಸ ಮಾಡಿಕೊಂಡು ಜಿಮ್‌ಗೆ ಹೋಗುತ್ತಿದ್ದ. ಈಗ ಇದ್ದ ಒಬ್ಬ ಮಗನನ್ನೂ ಕಳೆದುಕೊಂಡಿದ್ದೇನೆ,” ಎಂದು ನಂದನ್ ತಾಯಿ ಕಣ್ಣೀರಿಟ್ಟಿದ್ದಾರೆ.

ಘಟನೆ ಕುರಿತು ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related posts

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

JanaNota Editor

ಸದನದ ಕಲಾಪಕ್ಕೆ ಬಿಜೆಪಿ ನಿರಂತರ ಅಡ್ಡಿ: ಮಧು ಬಂಗಾರಪ್ಪ ಆಕ್ರೋಶ

JanaNota Editor

ಬೆಲ್ಲದ ಬೆಲೆ ಗಗನಕ್ಕೆ: ಕೆಜಿಗೆ 80 ರೂ. ಗಡಿ ತಲುಪಿದ ದರ

JanaNota Editor