ಬೆಂಗಳೂರು : ಇತ್ತೀಚೆಗಷ್ಟೇ ಪಿಯುಸಿ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದ್ದ ಸರ್ಕಾರ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನೂ ಏರಿಕೆ ಮಾಡಿದೆ.ಶೇಕಡಾ 5ರಷ್ಟು ಹೆಚ್ಚಳ ಮಾಡಿದೆ.
ಹೊಸದಾಗಿ ಪರೀಕ್ಷೆ ಬರೆಯುವವರು, ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ ಶುಲ್ಕದ ಜತೆಗೆ ಪರೀಕ್ಷಾ ಶುಲ್ಕ ಹೆಚ್ಚಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.
2027ರ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯುವ ಪರೀಕ್ಷೆಗಳಿಗೆ ಹೊಸ ಶುಲ್ಕ ಅನ್ವಯವಾಗಲಿದೆ. 2020ರ ಆದೇಶದಲ್ಲಿ ವಾರ್ಷಿಕವಾಗಿ ಪರೀಕ್ಷಾ ಶುಲ್ಕ ಪರಿಷ್ಕರಿಸಲು ನೀಡಿದ ಅವಕಾಶದ ಆಧಾರದ ಮೇಲೆ ಈ ಹೆಚ್ಚಳ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಷ್ಟು ಹೆಚ್ಚಳ?
ಈ ಹಿಂದೆ 710 ರೂಪಾಯಿ ಶುಲ್ಕಪಾವತಿಸುತ್ತಿದ್ದ ಸಾಮಾನ್ಯ ಅಭ್ಯರ್ಥಿಗಳು (ಫ್ರೆಶರ್ಸ್) ಇನ್ಮುಂದೆ 746 ರೂಪಾಯಿ ಪಾವತಿಸಬೇಕಾಗುತ್ತದೆ.
ಹೊಸ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ 248 ರೂಪಾಯಿಯಿಂದ 260 ರೂಪಾಯಿಗೆ ಹೆಚ್ಚಿಸಲಾಗಿದೆ. ಈಗಾಗಲೇ ನೋಂದಣಿಯಾಗಿರುವ ಖಾಸಗಿ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ.
ಈ ಶುಲ್ಕವು 72 ರೂಪಾಯಿಯಿಂದ 76 ರೂಪಾಯಿಗೆ ಏರಿಸಲಾಗಿದೆ.
