ಜನ ನೋಟ
ಶಿವಮೊಗ್ಗ

ಶಿವಮೊಗ್ಗದಲ್ಲಿ ₹4.80 ಕೋಟಿ ವೆಚ್ಚದಲ್ಲಿ ಜಂಗಮ ಸಮಾಜದ ಭವ್ಯ ಸಾಂಸ್ಕೃತಿಕ ಭವನ

ಶಿವಮೊಗ್ಗ: ನಗರದ ನವುಲೆ ರಸ್ತೆಯ ಚನ್ನಂಭಾಪುರದಲ್ಲಿ ಜಿಲ್ಲಾ ಜಂಗಮ ಸಮಾಜದ ಸಾಂಸ್ಕೃತಿಕ ಭವನವನ್ನು ₹4.80 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸುಮಾರು 10,800 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಭವನಕ್ಕೆ ಒಂದು ವರ್ಷದ ಹಿಂದೆ ಭೂಮಿಪೂಜೆ ನೆರವೇರಿಸಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಸಮಾಜದ ಬಂಧುಗಳು, ದಾನಿಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಸಮಾಜದ ಗೌರವಾಧ್ಯಕ್ಷ ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭವನ ನಿರ್ಮಾಣಕ್ಕಾಗಿ ಈಗಾಗಲೇ ನಿವೇಶನ ಖರೀದಿಸಲಾಗಿದೆ. ನಿರ್ಮಾಣ ಕಾರ್ಯಕ್ಕೆ ಅನುಕೂಲವಾಗುವಂತೆ ಕಾರ್ಯಕಾರಿ ಸಮಿತಿಯನ್ನು ಪುನರ್‌ರಚಿಸಲಾಗಿದ್ದು, ಸಮಾಜದ ಎಲ್ಲರ ಸಹಕಾರದೊಂದಿಗೆ ಭವನ ನಿರ್ಮಾಣದ ಕನಸನ್ನು ನನಸಾಗಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಜಂಗಮ ಸಮಾಜವು ಧರ್ಮಪ್ರಚಾರ, ಪೂಜೆ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜತೆಗೆ ಮಾನವೀಯ ಮೌಲ್ಯಗಳ ಪ್ರಸಾರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಘಟನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸಮಾಜವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದ್ದು, ಜಿಲ್ಲೆಯ ಇತರ ಸಮುದಾಯಗಳ ಮಾದರಿಯಲ್ಲಿ ಜಂಗಮ ಸಮಾಜಕ್ಕೂ ಸ್ವಂತ ಭವನ ನಿರ್ಮಾಣದ ಅಗತ್ಯವಿದೆ ಎಂದು ಹೇಳಿದರು.

ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ

ಜಗದ್ಗುರು ಪಂಚಾಚಾರ್ಯರ ತತ್ವಸಿದ್ಧಾಂತಗಳು ಜಂಗಮ ಪರಂಪರೆಯ ಪ್ರಮುಖ ಆಧಾರವಾಗಿವೆ. ಶಿವಭಕ್ತಿ, ಇಷ್ಟಲಿಂಗ ಆರಾಧನೆ, ಕಾಯಕ, ದಾಸೋಹ, ಸತ್ಯ, ಅಹಿಂಸೆ, ಕರುಣೆ ಹಾಗೂ ಸಮಾನತೆಯ ಮೌಲ್ಯಗಳಿಗೆ ಈ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಮಠಗಳು, ದೇವಾಲಯಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಜಂಗಮ ಪರಂಪರೆ ಸಮಾಜಕ್ಕೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಾರ್ಗದರ್ಶನ ನೀಡುತ್ತಿದೆ ಎಂದರು.

ಸಾಂಸ್ಕೃತಿಕ ಭವನ ನಿರ್ಮಾಣದಿಂದ ಸಮಾಜದ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲು ಅನುಕೂಲವಾಗಲಿದೆ. ಮುಂದಿನ ಪೀಳಿಗೆಗೆ ಜಂಗಮ ಸಮಾಜದ ಪರಂಪರೆ ಮತ್ತು ಮೌಲ್ಯಗಳನ್ನು ಪರಿಚಯಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಭವನ ನಿರ್ಮಾಣಕ್ಕೆ ಅಂದಾಜು ₹4.80 ಕೋಟಿ ವೆಚ್ಚವಾಗಲಿದ್ದು, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಜಂಗಮ ಸಮಾಜದವರು, ವೀರಶೈವ ಲಿಂಗಾಯತ ಸಮಾಜದವರು ಹಾಗೂ ಎಲ್ಲ ಸಮುದಾಯಗಳ ಸಹೃದಯರು ಧನಸಹಾಯ ನೀಡಬೇಕು. ಜನಪ್ರತಿನಿಧಿಗಳೂ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ನಿವೇಶನ ಖರೀದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಮತ್ತು ದೇಣಿಗೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಜಿಲ್ಲೆಯ ಜಂಗಮ ಬಂಧುಗಳು ಸಂಘದ ಸದಸ್ಯತ್ವ ಪಡೆದು ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.

ಸಮಾಜದ ಅಧ್ಯಕ್ಷ ಟಿ.ಈ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಟಿ.ಹೆಚ್. ನಟರಾಜ್, ಕೋಶಾಧ್ಯಕ್ಷ ಡಾ. ಕೆ.ಹೆಚ್. ಕುಮಾರಸ್ವಾಮಿ, ಎಂ.ಎಂ. ಚಂದ್ರಯ್ಯ, ಟಿ.ಬಿ. ಸೋಮಶೇಖರಯ್ಯ, ಜಿ.ಎಂ. ನಟರಾಜ್, ಸಿ. ರೇಣುಕಾರಾಧ್ಯ, ಹೆಚ್.ಬಿ. ಪಂಚಾಕ್ಷರಯ್ಯ, ವಿ.ಎಂ. ಜ್ಞಾನೇಶ್ವರ ಸ್ವಾಮಿ, ಜಗದೀಶ್ವರಯ್ಯ, ಮಲ್ಲಿಕಾರ್ಜುನ ಸ್ವಾಮಿ, ಪಿ.ಎಂ. ರುದ್ರಮುನಿ, ರವಿಕುಮಾರ್ ಉಪಸ್ಥಿತರಿದ್ದರು.

ಮಾಹಿತಿಗಾಗಿ: 9482635093, 7760679808, 8105676817.

ಭವನದಲ್ಲಿ ಪಾಠಶಾಲೆ, ವಿದ್ಯಾರ್ಥಿ ನಿಲಯ ಆರಂಭದ ಯೋಜನೆ

ಸಾಂಸ್ಕೃತಿಕ ಭವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡಲು ಉದ್ದೇಶಿಸಲಾಗಿದೆ. ಜತೆಗೆ ವೇದ, ಜ್ಯೋತಿಷ್ಯ ಹಾಗೂ ಸಂಸ್ಕೃತ ಪಾಠಶಾಲೆ ಆರಂಭಿಸುವ ಯೋಜನೆಯಿದೆ. ವೀರಶೈವ ಲಿಂಗಾಯತ ಸಮಾಜದ ಮಕ್ಕಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು.

ಪಂಚಪೀಠದ ಜಗದ್ಗುರುಗಳು ಹಾಗೂ ಶಾಖಾ ಮಠಗಳ ಸ್ವಾಮೀಜಿಗಳು ಆಗಮಿಸಿದ ಸಂದರ್ಭದಲ್ಲಿ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಭವನದಲ್ಲಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಮಾಜದ ಮುಖಂಡ ಡಾ. ಸಿ. ರೇಣುಕಾರಾಧ್ಯ ತಿಳಿಸಿದರು.

Related posts

ಅ.8, 9ರಂದು ನೀನಾಸಂ ನಾಟಕೋತ್ಸವ

JanaNota Editor

ಪರಿಸರ ಸೂಕ್ಷ್ಮ ವಲಯದಲ್ಲಿ ಯೋಜನೆ, ₹380 ಕೋಟಿ ಪಾವತಿ ಆರೋಪ : ಈಶ್ವರಪ್ಪ ಕಿಡಿ

JanaNota Editor

ವೈನ್‌ ಶಾಪ್‌ಗೆ ನುಗ್ಗಿ ಕೈಗೆ ಸಿಕ್ಕ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ

JanaNota Editor