ಜನ ನೋಟ
ಶಿವಮೊಗ್ಗ

ಮಳೆ ಕೊರತೆ: ರೈತರಿಗೆ ಹಗಲಿನಲ್ಲೇ 7–8 ಗಂಟೆ ವಿದ್ಯುತ್ ನೀಡಿ

ಹರತಾಳು ಹಾಲಪ್ಪ ಎಚ್ಚರಿಕೆ

ಶಿವಮೊಗ್ಗ: ಮಳೆ ಕೊರತೆಯಿಂದ ಬೆಳೆಗಳು ಒಣಗುವ ಸ್ಥಿತಿಯಲ್ಲಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಹಿತದೃಷ್ಟಿಯಿಂದ ದಿನಕ್ಕೆ ಕನಿಷ್ಠ ಏಳು ಅಥವಾ ಎಂಟು ಗಂಟೆ ಹಗಲಿನಲ್ಲೇ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ, ಸಾಗರ, ಸೊರಬ, ಶಿವಮೊಗ್ಗ ಗ್ರಾಮಾಂತರ ಹಾಗೂ ರಿಪ್ಪನ್‌ಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಭತ್ತ, ಜೋಳದ ಬೆಳೆಗಳು ಒಣಗುತ್ತಿದ್ದು, ಅಡಿಕೆ ತೋಟಗಳಿಗೂ ನೀರಿನ ಕೊರತೆಯಿಂದ ಹಾನಿಯಾಗುವ ಆತಂಕವಿದೆ ಎಂದರು.

ಈ ಹಿಂದೆ ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಸಲಾಗುತ್ತಿತ್ತು. ಇದೀಗ ಆರು ಗಂಟೆ ವಿದ್ಯುತ್ ನೀಡುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಿಗದಿತ ಅವಧಿಯಲ್ಲಿಯೂ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅರ್ಧ ಗಂಟೆ ಅಥವಾ ಮುಕ್ಕಾಲು ಗಂಟೆ ವಿದ್ಯುತ್ ಕಡಿತವಾಗುವುದರಿಂದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ದೊರೆಯುತ್ತಿಲ್ಲ. ಕಡಿತಗೊಂಡ ಅವಧಿಯನ್ನು ಹೆಚ್ಚುವರಿಯಾಗಿ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಹಗಲಿನ ವೇಳೆ ಸಾಕಷ್ಟು ವಿದ್ಯುತ್ ಲಭ್ಯವಿದೆ ಎಂದು ಸರ್ಕಾರವೇ ಹೇಳುತ್ತಿದೆ. ಹಗಲಿನಲ್ಲಿ ವಿದ್ಯುತ್ ಬಳಸಿ ನೀರು ಸಂಗ್ರಹಿಸಿ, ರಾತ್ರಿ ಗರಿಷ್ಠ ಬೇಡಿಕೆಯ ಸಂದರ್ಭದಲ್ಲಿ ಬಳಸುವ ಪಂಪ್ ಸಂಗ್ರಹಣಾ ಯೋಜನೆಯ ಬಗ್ಗೆಯೂ ಚರ್ಚಿಸಲಾಗಿದೆ. ಯೋಜನೆ ಇನ್ನೂ ಕಾರ್ಯಗತವಾಗಿಲ್ಲದಿರುವಾಗ ರೈತರಿಗೆ ಏಳು ಅಥವಾ ಎಂಟು ಗಂಟೆ ಹಗಲು ವಿದ್ಯುತ್ ನೀಡಲು ಏನು ತೊಂದರೆ ಎಂದು ಪ್ರಶ್ನಿಸಿದರು.

ರಿಪ್ಪನ್‌ಪೇಟೆ ಭಾಗದಲ್ಲಿ ರಾತ್ರಿ ವೇಳೆ ತೋಟಗಳಿಗೆ ನೀರು ಹಾಯಿಸಲು ರೈತರು ತೆರಳಬೇಕಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವುದರಿಂದ ಜೀವಭಯದಲ್ಲೇ ಹೊಲಗಳಿಗೆ ತೆರಳುವ ಪರಿಸ್ಥಿತಿ ಇದೆ. ಈ ಹಿಂದೆ ಆನೆ ದಾಳಿಯಿಂದ ಸಾವು ಸಂಭವಿಸಿದ ಘಟನೆಗಳೂ ನಡೆದಿವೆ. ರೈತರ ಸುರಕ್ಷತೆಯ ದೃಷ್ಟಿಯಿಂದ ಹಗಲಿನಲ್ಲೇ ವಿದ್ಯುತ್ ಪೂರೈಸಬೇಕು. ಈ ಬೇಡಿಕೆಗಾಗಿ ರಿಪ್ಪನ್‌ಪೇಟೆ ಭಾಗದಲ್ಲಿ ಹೋರಾಟವನ್ನೂ ನಡೆಸಲಾಗಿದೆ ಎಂದರು.

ಮೆಸ್ಕಾಂ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳ ಕೊರತೆಯಿಂದ ವಿದ್ಯುತ್ ಮಾರ್ಗಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಸಾಗರ ಹಾಗೂ ಶಿಕಾರಿಪುರದಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಪ್ರಭಾರ ಅಧಿಕಾರಿಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಶೇ.50ರಷ್ಟು ಲೈನ್‌ಮನ್‌ಗಳ ಕೊರತೆಯಿದೆ. ರಿಪ್ಪನ್‌ಪೇಟೆಯಲ್ಲಿ 28 ಲೈನ್‌ಮನ್‌ಗಳು ಇರಬೇಕಾದ ಕಡೆ ಕೇವಲ 16 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾದಾಗ ತಕ್ಷಣ ದುರಸ್ತಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 2019ರ ಬಳಿಕ ನೇಮಕಾತಿ ನಡೆಯದಿರುವುದು ಹಾಗೂ ವರ್ಗಾವಣೆಗಳಿಂದ ಸಿಬ್ಬಂದಿ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಸಮಸ್ಯೆ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಮೆಸ್ಕಾಂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಗರ ಮತ್ತು ಹೊಸನಗರ ಭಾಗಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ನಿರ್ವಹಣೆಗೆ ತೊಂದರೆಯಾಗಿದೆ. ಸಾಗರದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ನಗರಸಭೆ ಆಯುಕ್ತರು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿಯೂ ಉಪನಿರೀಕ್ಷಕರ ಕೊರತೆಯಿದೆ ಎಂದು ಹೇಳಿದರು.

ಮಲೆನಾಡು ಹಾಗೂ ಅರೆಮಲೆನಾಡು ಭಾಗಗಳ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಡಿಕೆ ಬಹುವಾರ್ಷಿಕ ಬೆಳೆಯಾಗಿರುವುದರಿಂದ ನೀರಿನ ಕೊರತೆಯಿಂದ ತೋಟಗಳು ಹಾಳಾದರೆ ರೈತರಿಗೆ ದೀರ್ಘಕಾಲದ ನಷ್ಟವಾಗಲಿದೆ. ಮುಂಬರುವ ಬೇಸಿಗೆಯಲ್ಲಿ ಸಮಸ್ಯೆ ಮತ್ತಷ್ಟು ತೀವ್ರವಾಗುವ ಮುನ್ನವೇ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಜಿಲ್ಲೆಯ ವಿವಿಧೆಡೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಸೊರಬ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಉದ್ರಿ ಹಾಗೂ ಜಾನಕಪ್ಪ, ಜಿಲ್ಲಾ ಮಾಧ್ಯಮ ಪ್ರಮುಖ ಮಂಜುನಾಥ್, ನಗರ ಮಂಡಲದ ಸಾಮಾಜಿಕ ಜಾಲತಾಣ ಪ್ರಮುಖ ಮುರಳಿ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.

Related posts

ಶಿವಮೊಗ್ಗ : ಶಾಲಾ ಕಟ್ಟಡಕ್ಕೆ NOC ನೀಡಲು ಲಂಚ : ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ

JanaNota Editor

ಶಿವಮೊಗ್ಗದ ಇಎಸ್ಐ ಆಸ್ಪತ್ರೆಗಳಿಗೆ ಶಾಸಕ ಚನ್ನಬಸಪ್ಪ ದಿಢೀರ್ ಭೇಟಿ: ರೋಗಿಗಳನ್ನು ಹೊರಗಿನ ಮೆಡಿಕಲ್‌ಗೆ ಕಳುಹಿಸಿದರೆ ಕ್ರಮ

JanaNota Editor

ಶಿವಮೊಗ್ಗದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಿಲ್ವರ್ ಶೋಗೆ ಚಾಲನೆ

JanaNota Editor