ಶಿವಮೊಗ್ಗ: ಔಷಧ ಕ್ಷೇತ್ರದಲ್ಲಿ ಮಾಡುವ ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಹೀಗಾಗಿ ಫಾರ್ಮಸಿ ವಿದ್ಯಾರ್ಥಿಗಳು ಆಳವಾದ ಜ್ಞಾನ, ವೃತ್ತಿಪರ ಪರಿಣತಿ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಕರೆ ನೀಡಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ಡಿ.ಫಾರ್ಮ್ ಹಾಗೂ ಬಿ.ಫಾರ್ಮ್ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ಕಾರ್ಯ ಆರಂಭಿಸುವ ಮುನ್ನ ‘ಯಾಕೆ?’ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇಂತಹ ಪ್ರಶ್ನೆಗಳು ಆತ್ಮಾವಲೋಕನ, ಹೊಸತನದ ಹುಡುಕಾಟ ಹಾಗೂ ಸಂಶೋಧನಾತ್ಮಕ ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಜಗತ್ತಿನ ಅನೇಕ ಮಹತ್ವದ ಆವಿಷ್ಕಾರಗಳ ಹಿಂದೆ ಇಂತಹ ಕುತೂಹಲವೇ ಪ್ರೇರಣೆಯಾಗಿದೆ ಎಂದರು.
ಭಾರತದ ಔಷಧೋದ್ಯಮವು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ದೇಶದ ಔಷಧೋದ್ಯಮದ ವಹಿವಾಟು ಸುಮಾರು ₹4.72 ಲಕ್ಷ ಕೋಟಿ ತಲುಪಿದೆ. ಕೈಗೆಟುಕುವ ದರದಲ್ಲಿ ಔಷಧಗಳನ್ನು ಒದಗಿಸುವ ಜನರಿಕ್ ಔಷಧಗಳ ಉತ್ಪಾದನೆಯಲ್ಲಿ ಭಾರತ ಪ್ರಮುಖ ಸ್ಥಾನ ಹೊಂದಿದೆ. ಕ್ಷೇತ್ರದಲ್ಲಿ ಸವಾಲುಗಳಿದ್ದರೂ ಯುವಕರಿಗೆ ಸಾಕಷ್ಟು ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ ಹಾಗೂ ನವೀನ ಚಿಂತನೆಯ ಮೂಲಕ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಖ್ಯಾತ ಮನಃಶಾಸ್ತ್ರಜ್ಞ ಡಾ. ಎಸ್.ಟಿ. ಅರವಿಂದ ಮಾತನಾಡಿ, ಶ್ರದ್ಧೆ, ಅರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸ ಯಶಸ್ಸಿಗೆ ಅಗತ್ಯವಾದ ಗುಣಗಳಾಗಿವೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಗೊಂದಲ ಹಾಗೂ ಆಕರ್ಷಣೆಗಳಿಗೆ ಮಣಿಯದೆ, ನಿಗದಿತ ಗುರಿಯತ್ತ ಗಮನ ಕೇಂದ್ರೀಕರಿಸುವ ಮನೋಬಲ ಬೆಳೆಸಿಕೊಳ್ಳಬೇಕು ಎಂದರು.
ವೈದ್ಯರ ಸಲಹೆಯಿಲ್ಲದೆ ಔಷಧ ಸೇವಿಸುವ ಪ್ರವೃತ್ತಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ. ಔಷಧಗಳ ಸುರಕ್ಷಿತ ಬಳಕೆ ಹಾಗೂ ಜವಾಬ್ದಾರಿಯುತ ವಿತರಣೆಯಲ್ಲಿ ಔಷಧ ತಜ್ಞರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಔಷಧಗಳ ಕುರಿತು ಸಮಗ್ರ ಜ್ಞಾನ ಪಡೆಯುವುದರ ಜೊತೆಗೆ ವಿವಿಧ ದೇಶಗಳ ಆರೋಗ್ಯ ಸೇವಾ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಜಾಗತಿಕ ಬದಲಾವಣೆಗಳಿಗೆ ಸಜ್ಜಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎನ್. ಶ್ರೀಹರ್ಷ ಮಾತನಾಡಿ, ಔಷಧ ಶಿಕ್ಷಣ ಕ್ಷೇತ್ರದಲ್ಲಿ ಕಾಲೇಜು 59 ವರ್ಷಗಳ ಶೈಕ್ಷಣಿಕ ಪರಂಪರೆಯನ್ನು ಹೊಂದಿದೆ. ಬದಲಾಗುತ್ತಿರುವ ಔಷಧೋದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಔಷಧ ತಜ್ಞರ ಜವಾಬ್ದಾರಿಯೂ ವಿಸ್ತರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಅನ್ವಯಾಧಾರಿತ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕಿ ಎಂ.ಆರ್. ಸೀತಾಲಕ್ಷ್ಮೀ ಮಾತನಾಡಿದರು. ಉಪನ್ಯಾಸಕರಾದ ಶಿಫಾ ಮುಜೀದ್ ಹಾಗೂ ಅಂಜಲಿ ಕಾರ್ಯಕ್ರಮ ನಿರೂಪಿಸಿದರು.
