ಬಾಲಿವುಡ್ನ ಯುವ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ.
ಅವರ ಚಾಲಕ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಗಾಯವಾಗಿದೆ. ಇದೇ ಘಟನೆಯಲ್ಲಿ ಆಟೋ ಚಾಲಕರೊಬ್ಬರಿಗೂ ಸಹ ಗಾಯಗಳಾಗಿವೆ. ನಟ ಟೈಗರ್ ಶ್ರಾಫ್ ಅವರು ದಾಳಿಯಿಂದ ಪಾರಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗುತ್ತಿದೆ.
ಮುಂಬೈನ ಜುಹು ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಟೈಗರ್ ಶ್ರಾಫ್ ಅವರು ಫುಟ್ಬಾಲ್ ಆಡಿ, ತಮ್ಮ ಬಿಎಂಡಬ್ಲು ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ. ಬೈಕುಗಳಲ್ಲಿ ಬಂದ ಮೂವರು ಅಗಂತುಕರು ಟೈಗರ್ ಶ್ರಾಫ್ ಇದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಸುಮಾರು 11 ಸುತ್ತು ಗುಂಡು ಹಾರಿಸಲಾಗಿದ್ದು, ದಾಳಿಯ ವೇಳೆ ಟೈಗರ್ ಶ್ರಾಫ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಆದರೆ ಅವರ ಇಬ್ಬರು ಸಿಬ್ಬಂದಿ ಮತ್ತು ಒಬ್ಬ ಆಟೋ ಚಾಲಕ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಮೋಹಿತ್ ಕುಮಾರ್, ‘ಟೈಗರ್ ಶ್ರಾಫ್ ಅವರಿಗೆ ಈ ದಾಳಿಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು 12 ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.
ದಾಳಿ ನಡೆದ ಕೆಲವೇ ಸಮಯಕ್ಕೆ ಅನಿಲ್ ಪಂಡಿತ್, ಅನ್ಮೋಲ್ ಬಿಷ್ಣೋಯಿ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಈ ದಾಳಿಯನ್ನು ಬಿಷ್ಣೋಯಿ ಗ್ಯಾಂಗಿನ ಸದಸ್ಯರು ಮಾಡಿರುವುದಾಗಿ ಹೇಳಿದ್ದಾರೆ. ‘ಇಂದು ಟೈಗರ್ ಶ್ರಾಫ್ಗೆ ಆಗಿರುವ ಕೃತ್ಯದ ಹೊಣೆಯನ್ನು ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಆದ ನಾವು ಹೊರುತ್ತೇವೆ.
ನಾವು ಅವನಿಗೆ ಕರೆ ಮಾಡಿ ಹೇಳಿ ಅರ್ಥಮಾಡಿಸಿದ್ದೆವು, ಆದರೆ ಅವನಿಗೆ ಅರ್ಥವಾಗಲಿಲ್ಲ. ಆದ್ದರಿಂದ ಇಂದು ಅವನಿಗೆ ಚೆನ್ನಾಗಿ ಪಾಠ ಕಲಿಸಿದ್ದೇವೆ. ಮುಂಬೈ ಚಲನಚಿತ್ರ ಉದ್ಯಮದಲ್ಲಿ ಯಾರು ನಮ್ಮ ಮಾತು ಕೇಳುವುದಿಲ್ಲವೋ ಅಥವಾ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಾರೋ, ಮುಂದಿನ ಸರದಿ ಅವರದೇ. ಕಾದು ನೋಡಿ.
ಸೂಚನೆ: ಮತ್ತು ಬೇರೆ ಗುಂಪಿನ ಕೆಲವು ನಾಯಿಗಳು ನಮ್ಮ ಹೆಸರಿನಿಂದ ಖ್ಯಾತಿ ಪಡೆಯಲು ಯೋಚಿಸುತ್ತಿವೆ. ಅವರನ್ನು ಶೀಘ್ರದಲ್ಲೇ ಕೊಂದು ಪ್ರಸಿದ್ಧರನ್ನಾಗಿ ಮಾಡುತ್ತೇವೆ’ ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.
