ಹೆಬ್ರಿ: ಉಡುಪಿ ಕಡೆಯಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಆಗುಂಬೆ ಘಾಟಿಯಲ್ಲಿ ತಿರುವು ಪಡೆಯಲಾಗದೆ ಕೆಲಕಾಲ ಸಿಲುಕಿಕೊಂಡ ಘಟನೆ ರವಿವಾರ ನಡೆದಿದೆ.
ಬಸ್ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಳಿಕ ಬಸ್ಸನ್ನು ಹಿಮ್ಮುಖವಾಗಿ ಚಲಾಯಿಸಿ ಸ್ವಲ್ಪ ದೂರಕ್ಕೆ ಕೊಂಡೊಯ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ರವಿವಾರ ರಜಾದಿನವಾಗಿದ್ದರಿಂದ ಘಾಟಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬಸ್ ಸಿಲುಕಿಕೊಂಡಿದ್ದರಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿದ್ದರು.
ಘಾಟಿಯ ತಿರುವುಗಳಲ್ಲಿ ಬಸ್ ಚಲಾಯಿಸಲು ಚಾಲಕರಿಗೆ ಸೂಕ್ತ ಅನುಭವ ಇರಬೇಕು. ಅಲ್ಲದೆ, ಇಂತಹ ಕಡಿದಾದ ತಿರುವುಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಕಡಿಮೆ ಉದ್ದದ ಬಸ್ಸುಗಳನ್ನು ನಿಯೋಜಿಸಬೇಕು ಎಂಬ ಅಭಿಪ್ರಾಯವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ.
