ಜನ ನೋಟ
ಶಿವಮೊಗ್ಗ

ಮಲೆನಾಡಿನಲ್ಲಿ ಬರದ ಛಾಯೆ : ರೈತರ ಕೃಷಿ ಸಾಲ ಮನ್ನಾಕ್ಕೆ ಒತ್ತಾಯ

ಶಿವಮೊಗ್ಗ : ಮಲೆನಾಡಿನಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಶಿವಮೊಗ್ಗ ಜಿಲ್ಲಾ ಘಟಕ, ಸಂಯುಕ್ತ ರೈತ ಸಂಘ ಸಾಗರ ಹಾಗೂ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಘಟಕ ಆಗ್ರಹಿಸಿವೆ.

ಈ ಸಂಬಂಧ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿರುವ ಸಂಘಟನೆಗಳು, ಸುಮಾರು 140 ವರ್ಷಗಳ ಬಳಿಕ ಮಲೆನಾಡು ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದೆ ಎಂದು ತಿಳಿಸಿವೆ.

ಕೆರೆ, ಕಟ್ಟೆ, ಬಾವಿ ಸೇರಿದಂತೆ ಹಲವು ಜಲಮೂಲಗಳು ಬತ್ತಿಹೋಗಿದ್ದು, ನೀರಿನ ಕೊರತೆಯಿಂದ ಕೃಷಿ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಮಟ್ಟವೂ ಕುಸಿದಿರುವ ಪರಿಣಾಮ ತೋಟಗಾರಿಕೆ, ವಾಣಿಜ್ಯ ಹಾಗೂ ಆಹಾರ ಬೆಳೆಗಳ ಮೇಲೂ ತೀವ್ರ ಪರಿಣಾಮ ಉಂಟಾಗಿದೆ ಎಂದು ಸಂಘಟನೆಗಳು ವಿವರಿಸಿವೆ.

ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಗ್ರಾಮೀಣ ಪ್ರದೇಶದ ಜನರು ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿವೆ.

ಸಾಗರ, ಹೊಸನಗರವನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹ

ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಶರಾವತಿ, ವರಾಹಿ, ಚಕ್ರ, ಅಂಜನಾಪುರ ಹಾಗೂ ತುಂಗಾ-ಭದ್ರ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಇದರಿಂದ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಂಘಟನೆಗಳು ತಿಳಿಸಿವೆ.

ಸಾಗರ ಮತ್ತು ಹೊಸನಗರ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದು ಪಕ್ಷಪಾತದ ಧೋರಣೆಯಾಗಿದೆ ಎಂದು ಆರೋಪಿಸಿರುವ ರೈತ ಸಂಘಟನೆಗಳು, ಈ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿವೆ.

ಪ್ರಮುಖ ಬೇಡಿಕೆಗಳು

ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬ್ಯಾಂಕ್‌ಗಳ ಸಾಲ ವಸೂಲಾತಿಗೆ ತಾತ್ಕಾಲಿಕ ತಡೆ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಕೃಷಿ ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸೇರಿಸಿ, ರೈತ ಕೂಲಿಕಾರರಿಗೆ 250ಕ್ಕೂ ಹೆಚ್ಚು ದಿನಗಳ ಉದ್ಯೋಗ ಭದ್ರತೆ ಕಲ್ಪಿಸಬೇಕು. ಬೆಳೆನಷ್ಟದ ಮಾಪನಕ್ಕೆ ಒಂದು ಗ್ರಾಮ ಪಂಚಾಯಿತಿಯನ್ನು ಒಂದು ಘಟಕವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರ ಅನುಪಾತದಲ್ಲಿ ಬೆಳೆನಷ್ಟ ಪರಿಹಾರ ನೀಡುವ ಪರಿಷ್ಕೃತ ನೀತಿ ಜಾರಿಗೊಳಿಸಬೇಕು. ಶೇ.33ರಷ್ಟು ಬೆಳೆನಷ್ಟವಾದರೂ ಪರಿಹಾರ ದೊರೆಯುವಂತೆ ನಿಯಮ ರೂಪಿಸಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.

ಮಲೆನಾಡಿನ ಆದಿವಾಸಿ ಹಾಗೂ ಬುಡಕಟ್ಟು ಜನರಿಗೆ ಹಿಂದಿನಂತೆ ಪೌಷ್ಟಿಕ ಆಹಾರ ಯೋಜನೆ ಮುಂದುವರಿಸುವುದರ ಜತೆಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು. ಅಂತರ್ಜಲ ಕೊರತೆಯಿರುವ ಪ್ರದೇಶಗಳಲ್ಲಿ ಜಲಪೂರಣ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಆದ್ಯತಾ ಯೋಜನೆ ರೂಪಿಸಬೇಕು. ಭತ್ತ, ಜೋಳ ಮತ್ತು ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಬೇಕು. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ಬರ ನಿರ್ಮೂಲನೆಗೆ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಬೇಕು ಎಂದು ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

Related posts

ಸೋಷಿಯಲ್ ಮೀಡಿಯಾ ದುರುಪಯೋಗಕ್ಕೆ ಕಳವಳ : ಸುದರ್ಶನ ಚನ್ನಂಗಿಹಳ್ಳಿ

JanaNota Editor

ಶಿವಮೊಗ್ಗದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಸಿದ್ಧತೆ: 7,651 ಅಭ್ಯರ್ಥಿಗಳು

JanaNota Editor

ಧರಣಿ ನಿಲ್ಲಿಸಲು ಮನವಿ: ಮನವೊಲಿಕೆ ವಿಫಲ

JanaNota Editor