ಜನ ನೋಟ
ಶಿವಮೊಗ್ಗ

ಶಿವಮೊಗ್ಗ ಸಿನಿ ದಸರಾಗೆ ಸಜ್ಜು : ಮಲೆನಾಡಿನ 10 ಕಿರುಚಿತ್ರಗಳ ಪ್ರದರ್ಶನ

ಶಿವಮೊಗ್ಗ : ಮಲೆನಾಡಿನ ಕಿರುಚಿತ್ರ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು, ಕನ್ನಡ ಚಿತ್ರರಂಗದ ಸಾಧಕರನ್ನು ಗೌರವಿಸುವುದು ಹಾಗೂ ವರನಟ ಡಾ. ರಾಜ್‌ಕುಮಾರ್ ಮತ್ತು ಅನಂತ್ ನಾಗ್ ಅಭಿನಯದ ಚಿತ್ರಗೀತೆಗಳ ಸಂಗೀತ ಸಂಭ್ರಮವನ್ನು ಒಳಗೊಂಡ ಶಿವಮೊಗ್ಗ ಸಿನಿ ದಸರಾ ಉತ್ಸವ ಅ.14ರಂದು ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಉತ್ಸವ ಉದ್ಘಾಟಿಸಲಿದ್ದಾರೆ ಎಂದರು.

ಸಿನಿಮೊಗೆ ಚಿತ್ರ ಸಮಾಜ ಹಾಗೂ ರಾಜೇಂದ್ರ ಸಿಂಗ್ ಬಾಬು ಅವರನ್ನು ಗೌರವಿಸಲಾಗುವುದು. ಚಿತ್ರರಂಗದಲ್ಲಿ ಸಾಧನೆ ಮಾಡುತ್ತಿರುವ ನಗರದ ಪ್ರತಿಭೆಗಳಾದ ಗಾರ್ಗಿ ಕಾರೆಹಕ್ಲು, ಚಂದ್ರಶೇಖರ ಶಾಸ್ತ್ರಿ, ಚಂದ್ರಶೇಖರ ಹಿರೇಗೋಣಿಗೆರೆ, ದಾನಮ್, ಶಿವಮೊಗ್ಗ ರಾಮಣ್ಣ ಹಾಗೂ ರಘು ಗುಂಡ್ಲು ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಉದ್ಘಾಟನೆಯ ಬಳಿಕ ‘ಪ್ರತಿಬಿಂಬ’ ಶೀರ್ಷಿಕೆಯಡಿ ಮಲೆನಾಡಿನ ಪ್ರತಿಭೆಗಳು ನಿರ್ಮಿಸಿರುವ 10 ಕಿರುಚಿತ್ರಗಳನ್ನು ಪ್ರದರ್ಶಿಸಿ, ಸಂವಾದ ನಡೆಸಲಾಗುವುದು. ‘ಮಾಲ್ಗುಡಿ ಡೇಸ್’ ಖ್ಯಾತಿಯ ನಟ ಮಾಸ್ಟರ್ ಮಂಜುನಾಥ್ ಹಾಗೂ ಮಾಸ್ಟರ್ ರೋಹಿತ್ ಶ್ರೀನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಾದ ನಡೆಸಿಕೊಡಲಿದ್ದಾರೆ ಎಂದರು.

ಪೃಥ್ವಿ ಗೌಡ ನಿರ್ದೇಶನದ ‘ಕಬಂಧ’, ಪ್ರಶಾಂತ್ ಸಾಗರ್ ಅವರ ‘ಶರಾವತಿ’, ನಾಗರಾಜ್ ನೀಲ್ ಅವರ ‘ದಿ ಗಿಫ್ಟ್’, ಮೇದಿನಿ ಕೆಳಮನೆ ಅವರ ‘ದಾಳಿ’, ಈಶಾನ್ಯ ಶರ್ಮ ಅವರ ‘ಡಬಲ್ ಟಿಕ್’, ನಾಗರಾಜ ಕಿತ್ತೂರು ಅವರ ‘ಖಾಸಗಿ ಕನಸಿನ ಕಾಗದ’, ನವನ್ ಶ್ರೀನಿವಾಸ್ ಅವರ ‘ಗೋಣಿ ಚೀಲ’, ಅನಿಶ್ ಶರ್ಮ ಅವರ ‘ವಡ್ಡಾರಾಧಕ’, ನವೀನ್ ತೇಜಸ್ವಿ ಅವರ ‘ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ’ ಹಾಗೂ ವಿದ್ಯಾಲಕ್ಷ್ಮಿ ಪ್ರಹ್ಲಾದ್ ಅವರ ‘ಘಮ’ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸಂಜೆ ‘ರಾಜ್–ಅನಂತ್ ಗಾನಯಾನ’ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿನಯ್ ಶಿವಮೊಗ್ಗ, ಪೃಥ್ವಿ ಗೌಡ, ಕಾರ್ತಿಕ್ ನಾಗಲಾಪುರ ಹಾಗೂ ಸಂಗೀತಾ ಕನ್ನಡ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮೇಲ್ವಿನ್ ಲೀಮಾ, ವಿನಯ್, ರಮೇಶ್, ರಾಘವೇಂದ್ರ ರಂಗಧೋಳ್ ಹಾಗೂ ವಿಠಲ್ ರಂಗಧೋಳ್ ವಾದ್ಯಸಂಗೀತದಲ್ಲಿ ಸಾಥ್ ನೀಡಲಿದ್ದಾರೆ. ಇಮ್ಯಾಜಿನ್ ಡಾನ್ಸ್ ಸ್ಟುಡಿಯೊ ತಂಡದಿಂದ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನವೂ ಇರಲಿದೆ.

ಸಿನಿ ದಸರಾ ಉತ್ಸವ ಸಮಿತಿಯ ಕಾರ್ಯದರ್ಶಿ ಯಶವಂತ್, ವೈದ್ಯನಾಥ, ವಿನಯ್ ಶಿವಮೊಗ್ಗ, ಜಿ. ವಿಜಯ್ ಕುಮಾರ್, ಅನಂತ್ ಹಾಗೂ ಮಹೇಶ್ ಉಪಸ್ಥಿತರಿದ್ದರು.

ಅ.14 ರಿಂದ ಕನ್ನಡ ಚಿತ್ರಗಳ ಪ್ರದರ್ಶನ

  • ಅ.14, ಬೆಳಿಗ್ಗೆ 8.30: ಮಲ್ಲಿಕಾರ್ಜುನ ಚಿತ್ರಮಂದಿರ — ಎರಡು ಕನಸು
  • ಅ.16: ಮಲ್ಲಿಕಾರ್ಜುನ ಚಿತ್ರಮಂದಿರ — ಸಂಪತ್ತಿಗೆ ಸವಾಲ್
  • ಅ.17: ವೀರಭದ್ರೇಶ್ವರ ಚಿತ್ರಮಂದಿರ — ಗಾಳಿಪಟ–2
  • ಅ.18: ವೀರಭದ್ರೇಶ್ವರ ಚಿತ್ರಮಂದಿರ — ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು

 

Related posts

ರಾಜ್ಯಾದ್ಯಂತ ಒಂದು ವರ್ಷ ಕೃತಕ ಪನ್ನೀರ್ ನಿಷೇಧ

JanaNota Editor

ವಂದೇ ಮಾತರಂ ಪೂರ್ಣಗೀತೆ ಹಾಡಿಸಿದ ಆರೋಪ : ಕಾಂಗ್ರೆಸ್ ಪ್ರತಿಭಟನೆ

JanaNota Editor

ಗುಣಮಟ್ಟದ ಸಂಶೋಧನೆ, ನವೀನ ಚಿಂತನೆ ಶೈಕ್ಷಣಿಕ ಸಂಸ್ಥೆಯ ಶ್ರೇಷ್ಠತೆಗೆ ಪ್ರಮುಖ ಆಧಾರ: ಡಾ. ಸ್ವಾಮಿ

JanaNota Editor