ಜನ ನೋಟ
ಶಿವಮೊಗ್ಗ

ತೀರ್ಥಹಳ್ಳಿ ಮತದಾರರ ಪಟ್ಟಿ ವಿಚಾರ : ಬಿಜೆಪಿ ಮುಖಂಡರ ದೂರಿಗೆ ಕಾಂಗ್ರೆಸ್ ಆಕ್ಷೇಪ

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಸುರಳಿ–ಬಾಚ್ಚೆಹಳ್ಳಿ ಗ್ರಾಮದ ಭಾಗ ಸಂಖ್ಯೆ 186ರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ನೀಡಿರುವ ದೂರನ್ನು ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.

ಈ ಕುರಿತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಸಿ. ಯೋಗೀಶ್ ಅವರು ಜಿಲ್ಲೆಯ ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಬಿಜೆಪಿ ಮುಖಂಡ ಸತೀಶ್ ಅವರು ಸೆ.16, 2026ರಂದು ತಾಲ್ಲೂಕು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಭಾಗ ಸಂಖ್ಯೆ 186ರಲ್ಲಿರುವ 81 ಮಂದಿ ಮತದಾರರು ಬೇರೆಡೆ ವಾಸವಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರ ವಿವರಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳು ಹಾಗೂ ಗಣತಿ ನಮೂನೆಗಳ ಆಧಾರದ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ತಿಳಿಸಿದೆ.

ಮತದಾರರ ಪಟ್ಟಿಯ ಪರಿಶೀಲನೆಯ ಹೆಸರಿನಲ್ಲಿ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಅಥವಾ ಆತಂಕ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ವಾಸ್ತವಾಂಶಗಳ ಆಧಾರದ ಮೇಲೆ ಪರಿಶೀಲಿಸಿ, ಅರ್ಹ ಮತದಾರರ ಹೆಸರನ್ನು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ತೆಗೆದುಹಾಕಬಾರದು. ಅನರ್ಹ ಹೆಸರುಗಳು ಕಂಡುಬಂದಲ್ಲಿ ಕಾನೂನುಬದ್ಧ ಪ್ರಕ್ರಿಯೆಯಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಭಾಗ ಸಂಖ್ಯೆ 186ಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಸತ್ಯಾಸತ್ಯತೆ ದೃಢಪಡಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಹೆಚ್.ಸಿ. ಯೋಗೀಶ್ ಮನವಿ ಮಾಡಿದ್ದಾರೆ.

Related posts

ಶಿವಮೊಗ್ಗ : ದೋಷಯುಕ್ತ ಮೊಬೈಲ್ ಮಾರಾಟ : ಕಂಪನಿ ಹಾಗೂ ಮಾರಾಟಗಾರರಿಗೆ ₹15 ಸಾವಿರ ಪರಿಹಾರ ಆದೇಶ

JanaNota Editor

ಮಲೆನಾಡು ಜಾಬಥಾನ್‌ಗೆ 4,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು

JanaNota Editor

ಹೊಲದಲ್ಲಿ ಹೂತಿಟ್ಟ ₹5 ಲಕ್ಷ ಹಣಕ್ಕೆ ಏನಾಯ್ತು ಗೊತ್ತಾ? ಗೆದ್ದಲುಗಳು ಮಾಡಿದ್ದೇನು ನೋಡಿ

JanaNota Editor