ಜನ ನೋಟ
ಶಿವಮೊಗ್ಗ

ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ₹799.20 ಕೋಟಿ ಅಕ್ರಮ ಆರೋಪ: ಸಿಬಿಐ, ಇಡಿ ತನಿಖೆಗೆ ಆರಗ ಜ್ಞಾನೇಂದ್ರ ಆಗ್ರಹ

ಶಿವಮೊಗ್ಗ: ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಸುಮಾರು ₹799.20 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಪ್ರಕರಣವನ್ನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ (ಇಡಿ) ವಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಪಾತ್ರದ ಬಗ್ಗೆಯೂ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ತನಿಖಾ ಸಂಸ್ಥೆಗಳಿಂದ ಮಾತ್ರ ತನಿಖೆ ನಡೆಸುವುದು ಸೂಕ್ತವಲ್ಲ ಎಂದರು. ಹಣದ ವಹಿವಾಟು ಹೊರರಾಜ್ಯಗಳಿಗೂ ನಡೆದಿರುವ ಆರೋಪ ಇರುವುದರಿಂದ ಸಿಬಿಐ ಅಥವಾ ಇಡಿಗೆ ಪ್ರಕರಣ ವಹಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಮೂರು ವರ್ಷಗಳಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆಗೆ ಒಬ್ಬರಿಗೆ ₹2,950ರಂತೆ ಸುಮಾರು 28 ಲಕ್ಷ ಮಂದಿಗೆ ತಪಾಸಣೆ ನಡೆಸಲಾಗಿದೆ ಎಂದು ತೋರಿಸಿ ₹799.20 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ರಾಜ್ಯದಾದ್ಯಂತ ವಾಸ್ತವವಾಗಿ ಆರೋಗ್ಯ ತಪಾಸಣೆ ನಡೆದಿರುವುದಕ್ಕೆ ಸಮರ್ಪಕ ದಾಖಲೆಗಳಿಲ್ಲ ಎಂದು ಆರೋಪಿಸಿದರು.

ತಪಾಸಣೆಗಾಗಿ ಎಂಟು ಗುತ್ತಿಗೆದಾರರಿಗೆ 81 ವರ್ಕ್‌ ಆರ್ಡರ್‌ಗಳನ್ನು ನೀಡಲಾಗಿದೆ. ಆದರೆ ಯಾವ ಕಾರ್ಮಿಕರನ್ನು ಎಲ್ಲಿ ಪರೀಕ್ಷಿಸಲಾಯಿತು, ಯಾವ ವೈದ್ಯರು ತಪಾಸಣೆ ನಡೆಸಿದರು, ಯಾವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಿತು, ಬಳಸಿದ ಕಿಟ್‌ಗಳ ಖರೀದಿ ಮತ್ತು ಪಾವತಿ ವಿವರಗಳಂತಹ ಪ್ರಮುಖ ದಾಖಲೆಗಳು ಲಭ್ಯವಿಲ್ಲ ಎಂದು ದೂರಿದರು.

ಒಬ್ಬ ಕಾರ್ಮಿಕ ಹಾಗೂ ಅವರ ಅವಲಂಬಿತರಿಗೆ ಸುಮಾರು 20 ಬಗೆಯ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಎಚ್‌ಐವಿ ಪರೀಕ್ಷಾ ಕಿಟ್‌ಗಳ ಖರೀದಿಯನ್ನೂ ತೋರಿಸಲಾಗಿದೆ. ಸಣ್ಣ ಮಕ್ಕಳಿಗೂ ಎಚ್‌ಐವಿ ಪರೀಕ್ಷೆ ನಡೆಸಲಾಗಿದೆ ಎಂದು ಬಿಲ್‌ ಮಾಡಿರುವುದು ಗಂಭೀರ ವಿಚಾರ ಎಂದು ಅವರು ಹೇಳಿದರು.

ಈ ಯೋಜನೆಯ ಹಣದ ವಹಿವಾಟು ದೆಹಲಿ, ಕೇರಳ ಸೇರಿದಂತೆ ಹೊರರಾಜ್ಯಗಳಿಗೂ ನಡೆದಿರುವ ಅನುಮಾನವಿದೆ. ವೈದ್ಯರು ಸೇರಿದಂತೆ ಕೆಲವರಿಗೆ ನಗದು ರೂಪದಲ್ಲಿ ಹಣ ಪಾವತಿಸಲಾಗಿದೆ ಎಂಬ ಆರೋಪವೂ ಇದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆ, ಕಾರ್ಮಿಕ ಮಂಡಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕು. ಸಚಿವರ ಗಮನಕ್ಕೆ ಬಾರದೆ ಮೂರು ವರ್ಷಗಳ ಕಾಲ ಇಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚಾಗಲು ಸಾಧ್ಯವೇ ಎಂಬುದನ್ನೂ ತನಿಖೆ ಮಾಡಬೇಕು ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ಕಾರ್ಮಿಕ ಇಲಾಖೆಯ ಇತರ ಯೋಜನೆಗಳಲ್ಲಿಯೂ ಅಕ್ರಮ ನಡೆದಿರುವ ಸಾಧ್ಯತೆಯಿದ್ದು, ಈ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಗ್ಯ ತಪಾಸಣೆ ಯೋಜನೆಯೊಂದರಲ್ಲೇ ₹799.20 ಕೋಟಿ ಅಕ್ರಮದ ಆರೋಪವಿದ್ದು, ಸಮಗ್ರ ತನಿಖೆ ನಡೆಸಿದರೆ ಇನ್ನಷ್ಟು ವಿಚಾರಗಳು ಹೊರಬರಲಿವೆ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಆರ್.ಕೆ. ಸಿದ್ರಾಮಣ್ಣ ಹಾಗೂ ಹೆದ್ದೂರು ನವೀನ್ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲೇ ₹30 ಕೋಟಿ ಖರ್ಚು ಆರೋಪ

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ದಾಖಲೆ ಸೃಷ್ಟಿಸಿ, ಸುಮಾರು ₹30 ಕೋಟಿ ಖರ್ಚು ಮಾಡಲಾಗಿದೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.

ಕುಂಸಿಯಲ್ಲಿ 1,402, ಟಿಪ್ಪುನಗರದಲ್ಲಿ 1,502, ಹಾರನಹಳ್ಳಿಯಲ್ಲಿ 1,602 ಜನ ಸೇರಿದಂತೆ ವಿವಿಧೆಡೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ ಸ್ಥಳೀಯವಾಗಿ ವಿಚಾರಿಸಿದಾಗ, ಇಂತಹ ಆರೋಗ್ಯ ತಪಾಸಣೆ ನಡೆದಿರುವ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ಇಲ್ಲ ಎಂದು ಹೇಳಿದರು.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಇಂತಹ ಯಾವುದೇ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆದಿಲ್ಲ ಎಂದು ಹಲವು ಶಾಸಕರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದಿರುವುದಾಗಿ ಆರಗ ಜ್ಞಾನೇಂದ್ರ ತಿಳಿಸಿದರು.

Related posts

ಅಪೋಲೋ ಆಸ್ಪತ್ರೆ ವತಿಯಿಂದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಆರೋಗ್ಯ ತಪಾಸಣಾ ಶಿಬಿರ

JanaNota Editor

ಹೊಳೆಹೊನ್ನೂರು : ಹೊಸ ಮಿಷನ್ ಟ್ರಯಲ್ ವೇಳೆ ದುರಂತ: ವಿದ್ಯುತ್ ಶಾಕ್‌ಗೆ ಪೇಂಟರ್ ಸಾವು

JanaNota Editor

ನೂತನ ಸಚಿವರಿಗೆ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

JanaNota Editor